ರಾಜ್ಯದ 30 ಲಕ್ಷ ಡೋಸ್ ಕೋವಿಡ್ ಲಸಿಕೆ ಬೇಡಿಕೆ ಶೀಘ್ರಗತಿಯಲ್ಲಿ ಪರಿಗಣಿಸಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಕೈಗೊಂಡಿರುವ ಲಸಿಕಾ ಅಭಿಯಾನಕ್ಕೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ 2ನೇ ಡೋಸ್​​ಗೆ ಲಸಿಕೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 30 ಲಕ್ಷ ಡೋಸ್ ಲಸಿಕೆ ಬೇಡಿಕೆಯನ್ನು ಶೀಘ್ರಗತಿಯಲ್ಲಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಕೈಗೊಂಡಿರುವ ಲಸಿಕಾ ಅಭಿಯಾನಕ್ಕೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ 2ನೇ ಡೋಸ್​​ಗೆ ಲಸಿಕೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 30 ಲಕ್ಷ ಡೋಸ್ ಲಸಿಕೆ ಬೇಡಿಕೆಯನ್ನು ಶೀಘ್ರಗತಿಯಲ್ಲಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 

ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಎ.ಎಸ್ ಓಕ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯಪೀಠ ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಲಿಖಿತ ಮಾಹಿತಿ ನೀಡಿ, ಕೋವಿಡ್ ಲಸಿಕಾ ಅಭಿಯಾನದಲ್ಲಿ 2ನೇ ಡೋಸ್ ನೀಡಲು ಲಸಿಕೆ ಕೊರತೆಯಾಗಲಿದೆ. ಈ ನಿಟ್ಟಿನಲ್ಲಿ 30 ಲಕ್ಷ ಡೋಸ್ ಲಸಿಕೆ ಪೂರೈಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ವರದಿ ಪರಿಶೀಲಿಸಿದ ಪೀಠ, ಜುಲೈನಲ್ಲಿ 37,13,805 ಮಂದಿಗೆ ಮತ್ತು ಆಗಸ್ಟ್​ನಲ್ಲಿ 23,74,156 ಮಂದಿಗೆ ಸೇರಿ ಒಟ್ಟು 60 ಲಕ್ಷಕ್ಕೂ ಅಧಿಕ ಮಂದಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ನೀಡಬೇಕಾಗಿದೆ. ಅದೇ ರೀತಿ ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ 9,83,252 ಮಂದಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ನೀಡಬೇಕಿದೆ. ಆದರೆ ರಾಜ್ಯದ ಬಳಿ ಇರುವ ಪ್ರಮಾಣ ನೋಡಿದರೆ ಲಸಿಕೆ ಕೊರತೆ ಉಂಟಾಗಲಿದೆ. ಆದ್ದರಿಂದ ಲಸಿಕೆ ಕೊರತೆಯಾಗದಂತೆ ರಾಜ್ಯ ಸರ್ಕಾರ ಜುಲೈ 13ರಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಬೇಡಿಕೆ ಸಲ್ಲಿಸಿರುವಂತೆ 30 ಲಕ್ಷ ಡೋಸ್ ಹೆಚ್ಚುವರಿ ಲಸಿಕೆ ಪೂರೈಕೆಗೆ ಕೇಂದ್ರ ಕ್ರಮ ಕೈಗೊಳ್ಳಬೇಕು. ರಾಜ್ಯದ ಬೇಡಿಕೆಯನ್ನು ಆದಷ್ಟು ಶೀಘ್ರವಾಗಿ ಪರಿಶೀಲಿಸಿ ಲಸಿಕೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಪೀಠ ನಿರ್ದೇಶಿಸಿತು.

ಇದೇ ವೇಳೆ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿರುವ ಮಕ್ಕಳಿಗೆ ರೋಗ ನಿರೋಧಕ ಲಸಿಕೆ ನೀಡುವ ಅಭಿಯಾನವನ್ನು ಮತ್ತೆ ಆರಂಭಿಸುವಂತೆ ಸರ್ಕಾರಕ್ಕೆ ನಿರ್ದೇಶಿತು.

ವಿಚಾರಣೆ ವೇಳೆ ರಾಜ್ಯದಲ್ಲಿ ಜುಲೈ 12ರವರೆಗೆ 2,57,79,659 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 1,25,78,804 (ಶೇ.49) ಮತ್ತು ನಗರ ಪ್ರದೇಶಗಳಲ್ಲಿ 1,32,00,855 (ಶೇ.51) ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com