ಎಸ್​ಎಸ್​ಎಲ್​ಸಿ ಪರೀಕ್ಷಾ ಹಾಲ್ ಟಿಕೆಟ್ ಪಡೆಯಲಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ

ಎಸ್​ಎಸ್​ಎಲ್​ಸಿ ಪರೀಕ್ಷಾ ಹಾಲ್ ಟಿಕೆಟ್ ಪಡೆಯಲಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.
ಪರೀಕ್ಷೆ ನಡೆಯುವ ಕೊಠಡಿಯಲ್ಲಿ ಸ್ಯಾನಿಟೈಸ್ ಮಾಡುತ್ತಿರುವ ಸಿಬ್ಬಂದಿ.
ಪರೀಕ್ಷೆ ನಡೆಯುವ ಕೊಠಡಿಯಲ್ಲಿ ಸ್ಯಾನಿಟೈಸ್ ಮಾಡುತ್ತಿರುವ ಸಿಬ್ಬಂದಿ.

ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷಾ ಹಾಲ್ ಟಿಕೆಟ್ ಪಡೆಯಲಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ ತಿಂಗಳಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

ಶುಲ್ಕ ಪಾವತಿಸದ ಕಾರಣಕ್ಕಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆಯಿಂದ ವಂಚಿತಳಾಗಿ ತೀವ್ರವಾಗಿ ನೊಂದ ವಿದ್ಯಾರ್ಥಿನಿ ಮನೆಗೆ ಶುಕ್ರವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿದ್ದು. ಆಗಸ್ಟ್​ ತಿಂಗಳಲ್ಲಿ ಪರೀಕ್ಷೆ ಬರೆಯಲು ಸಿದ್ಧಳಾಗುವಂತೆ ಧೈರ್ಯ ತುಂಬಿದರು.

ಕೊರಟಗೆರೆ ಮೂಲದ ಬಾಲಕಿ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್​ಸಿ ವಿದ್ಯಾರ್ಥಿನಿಯಾಗಿದ್ದು, ಕಳೆದ ವರ್ಷದ ಶಾಲಾ ಶುಲ್ಕ, ವಸತಿ ಮತ್ತು ಊಟದ ಶುಲ್ಕ ಬಾಕಿಯಿರುವ ಕಾರಣಕ್ಕೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. 

9ನೇ ತರಗತಿಯಲ್ಲಿ ಶೇ.96 ಅಂಕ ಗಳಿಸಿರುವ ವಿದ್ಯಾರ್ಥಿನಿ ಈ ಬಾರಿ ಹಣವಿಲ್ಲದ ಕಾರಣಕ್ಕೆ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳುವುದು ಸಾಧ್ಯವಾಗಿಲ್ಲ ಎಂದು ತೀವ್ರವಾಗಿ ನೊಂದಿದ್ದರು. 

ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಕ್ಷಣ ಸಚಿವ ಸುರೇಶ್ ಕುಮಾರ್ ನೇರವಾಗಿ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ್ದಾರೆ. 

ಈ ವೇಳೆ ವಿದ್ಯಾರ್ಥಿ ಹಾಗೂ ಆಕೆಯ ಪೋಷಕರೊಂದಿಗೆ ಮಾತನಾಡಿರುವ ಅವರು, ಆಗಸ್ಟ್​ನಲ್ಲಿ ನೀಡಲಾಗುವ ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳುವಂತೆ ವಿದ್ಯಾರ್ಥಿನಿಗೆ ಕಿವಿಮಾತು ಹೇಳಿದ್ದಾರೆ. 

ಈಗ ಪ್ರವೇಶಾತಿ ಸಿಕ್ಕಿಲ್ಲವೆಂದ ಮಾತ್ರಕ್ಕೆ ಆಗಸ್ಟ್ ತಿಂಗಳಲ್ಲಿ ನಡೆಸುವ ಪರೀಕ್ಷೆಗೆ ಯಾವುದೇ ತೊಂದರೆ ಆಗುವುದಿಲ್ಲ. ಆಗಲೂ ಹೊಸ ವಿದ್ಯಾರ್ಥಿಯಾಗಿಯೇ ಪರೀಕ್ಷೆ ಬರೆಯಬಹುದು. ಹೆದರುವ ಅವಶ್ಯಕತೆ ಇಲ್ಲ ಎಂದು ಮನವೊಲಿಸಿದ್ದಾರೆ.

ಶುಲ್ಕ ಕಟ್ಟದ ಕಾರಣ ಬಾಲಕಿಗೆ ಹಾಲ್ ಟಿಕೆಟ್ ದೊರೆತಿಲ್ಲ. ಅಲ್ಲದೆ, ಶಾಲೆಗೆ ಬಾಲಕಿಯ ಫೋಟೋವನ್ನು ನೀಡಲಾಗಿಲ್ಲ. ಒಎಂಆರ್ ಶೀಟ್ ನಲ್ಲಿ ಫೋಟೋ ಮುದ್ರಣಗೊಂಡಿರುವುದು ಮುಖ್ಯವಾಗಿದೆ. ಒಎಂಆರ್ ಶೀಟ್ ಗಳು ಈಗಾಗಲೇ ತಾಲೂಕುಗಳಿಗೆ ನೀಡಲಾಗಿದ್ದು, ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆಗಳೂ ಪೂರ್ಣಗೊಂಡಿವೆ. ಈ ಸಮಯದಲ್ಲಿ ಮತ್ತೆ ಒಎಂಆರ್ ಶೀಟ್ ಗಳ ಮುದ್ರಣ ಸಾಧ್ಯವಾಗುವುದಿಲ್ಲ. ಶೇ.98ರಷ್ಟು ವಿದ್ಯಾರ್ಥಿಗಲು ಈಗಾಗಲೇ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಂಡಿದ್ದಾರೆಂದು ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಫೋಟೋ ನೀಡದ ಕಾರಣ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷಾ ಹಾಲ್ ಟಿಕೆಟ್ ಸಿಗದೆ ಪರೀಕ್ಷೆಯಿಂದ ವಂಚಿತರಾಗಿರುವ ಮತ್ತೊಂದು ಘಟನೆ ಬಾಗಲಕೋಟೆಯಲ್ಲೂ ನಡೆದಿದೆ. 

ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಜುಲೈ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. ಆದರೂ ಆಗಸ್ಟ್‌ನಲ್ಲಿ ಪರೀಕ್ಷೆ ನಡೆಸುವ ವಿಧಾನಗಳ ಬಗ್ಗೆ ಇಲಾಖೆ ಚರ್ಚೆ ನಡೆಸುತ್ತಿದೆ ಎಂದು ಹೇಳಿದ್ದಾರೆ. 

ಆಗಸ್ಟ್ ತಿಂಗಳಿನಲ್ಲಿ ನಡೆಸಲಾಗುವ ಪರೀಕ್ಷೆ ಕುರಿತು ದಿನಾಂಕ ನಿಗದಿಪಡಿಸಲಾಗಿಲ್ಲ. ಜುಲೈ ತಿಂಗಳಿನಲ್ಲಿ ನಡೆಯಲಿರುವ ಪರೀಕ್ಷೆಯ ಸಿದ್ಧತೆಯನ್ನು ಮೂರು ತಿಂಗಳ ಹಿಂದೆಯೇ ನಡೆಸಲಾಗಿತ್ತು. ಉಳಿದ ಪ್ರಕ್ರಿಯೆಗಳ ಪೂರ್ಣಗೊಳಿಸಲು 15 ದಿನ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಇದೀಗ ಮತ್ತೆ ಪರೀಕ್ಷೆ ಕುರಿತು ಇಷ್ಟು ಕಡಿಮೆ ಸಮಯದಲ್ಲಿ ಸಿದ್ಧತೆ ನಡೆಸುವುದು ಕಷ್ಟಕರವಾಗಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com