ಮಾಸಾಂತ್ಯಕ್ಕೆ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ?

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಗಮನಕ್ಕೆ ದಿನಗಣನೆ ಶುರುವಾಗಿದಂತಿದೆ. ಜುಲೈ ಅಂತ್ಯದ ವೇಳೆಗೆ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ 2 ವರ್ಷ ತುಂಬಿದ ಹೊತ್ತಲ್ಲಿ ಪದತ್ಯಾಗ ಮಾಡಲಿದ್ದಾರೆಂದು ಹೇಳಲಾಗುತ್ತಿದೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಗಮನಕ್ಕೆ ದಿನಗಣನೆ ಶುರುವಾಗಿದಂತಿದೆ. ಜುಲೈ ಅಂತ್ಯದ ವೇಳೆಗೆ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ 2 ವರ್ಷ ತುಂಬಿದ ಹೊತ್ತಲ್ಲಿ ಪದತ್ಯಾಗ ಮಾಡಲಿದ್ದಾರೆಂದು ಹೇಳಲಾಗುತ್ತಿದೆ. 

ಪುತ್ರ ವಿಜಯೇಂದ್ರ ಜೊತೆ ನಿನ್ನೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರು, ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ನಗುಮೊಗದಲ್ಲಿರುವುದು ಕಂಡು ಬಂದಿತ್ತು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಸ್ತುತ ಮುಂದುವರೆಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಹೇಳಿದ್ದರು. ಈ ಪ್ರಸ್ತುತ ಎಂಬ ಪದ ಇದೀಗ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ. 

ಇದೇ ಜುಲೈ 26ಕ್ಕೆ ಬಿ.ಎಸ್. ಯಡಿಯೂರಪ್ಪ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಅವಧಿ ಪೂರೈಸಲಿದ್ದಾರೆ. 2 ವರ್ಷ ಪೂರ್ಣಗೊಳಿಸಿದ ಬಳಿಕ ಅನಾರೋಗ್ಯ ಕಾರಣ ನೀಡಿ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. 

ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಅವಶ್ಯಕತೆಯಿದ್ದು, ಪ್ರಕ್ರಿಯೆ ಆರಂಭಿಸಿದ್ದೇವೆ. ನೀವು ಮಾಸ್ ಲೀಡರ್, ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. 2 ವರ್ಷದ ಸಂಭ್ರಮ ಪೂರೈಸಿ ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಬನ್ನಿ. ಆಗಸ್ಟ್ ಮೊದಲ ವಾರದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೈಕಮಾಂಡ್ ಹೇಳಿದೆ ಎನ್ನಲಾಗಿದೆ.

ಈ ನಡುವೆ ಪದತ್ಯಾಗ ಮಾಡಿದ ಯಡಿಯೂರಪ್ಪ ಅವರನ್ನು ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡುವಂತೆ ಕೆಲ ಬಿಜೆಪಿ ನಾಯಕರು ಸಲಹೆ ನೀಡಿದ್ದು, ಯಡಿಯೂರಪ್ಪ ಅವರು, ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವಂತೆ ಸಹಾಯ ಮಾಡುವುದಾಗಿ ಪುನರುಚ್ಚರಿಸಿದ್ದಾರೆಂದು ತಿಳಿದುಬಂದಿದೆ. 

ಇನ್ನು ಪುತ್ರ ವಿಜಯೇಂದ್ರ ಜೊತೆಗೆ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಿದ್ದು ಕೂಡ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. 

ತಮ್ಮ ಬಳಿಕ ಪುತ್ರ ವಿಜಯೇಂದ್ರ ಅವರಿಗೆ ಸಿಎಂ ಸ್ಥಾನ ದೊರಕುವಂತೆ ಮಾಡಲು ಯಡಿಯೂರಪ್ಪ ಅವರು ಲಾಬಿ ನಡೆಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ. 

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸುಲಭದ ವಿಚಾರವಲ್ಲ. ಪರ್ಯಾಯ ನಾಯಕರ ಸೃಷ್ಟಿಯ ಬಗ್ಗೆ ಹೈಕಮಾಂಡ್‌ಗೆ ಯೋಚನೆಯಿದ್ದರೂ ಅಂತಹವರ ಶೋಧ ಇನ್ನೂ ಆಗಿಲ್ಲ. ಯಡಿಯೂರಪ್ಪ ಅವರಿಗೆ ಹೋಲಿಕೆಯಾಗುವಂತಹ ಮತ್ತೊಬ್ಬ ಲಿಂಗಾಯತ ನಾಯಕರಾರೂ ರಾಜ್ಯದಲ್ಲಿ ಇಲ್ಲ ಎಂದು ಪಕ್ಷದ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಈ ನಡುವೆ ಒಕ್ಕಲಿಗರ ನಾಯಕ ಸದಾನಂದ ಗೌಡ ಅವರನ್ನು ಮುಂದಿನ ಸಿಎಂ ಮಾಡಲು ಯತ್ನಗಳು ನಡೆದಿತ್ತು. ಆದರೆ, ಮೋದಿಯವರಿಂದ ಮೆಚ್ಚುಗೆ ಗಳಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಈ ಪ್ರಯತ್ನಗಳಿಗೆ ಹಿನ್ನಡೆಯುಂಟಾದಂತಾಗಿದೆ. 

ಇದರಂತೆ ಜುಲೈ ಅಂತ್ಯದೊಳಗೆ ನಾಯಕತ್ವದ ಬದಲಾವಣೆ ಮಾಡಲು ಮುಂದಾಗಿರುವ ಹೈಕಮಾಂಡಾ'ಗೆ ಈ ವೇಳೆಗಾಗಲೇ ಮತ್ತೊಬ್ಬ ಸಮರ್ಥ ವ್ಯಕ್ತಿಯನ್ನು ಹುಡುಕುವುದು ಸವಾಲಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com