ಕೊರೋನಾ ಆತಂಕದ ನಡುವೆಯೇ ಇಂದಿನಿಂದ ಎಸ್ಎಸ್ಎಲ್'ಸಿ ಪರೀಕ್ಷೆ: ಆಲ್ ದಿ ಬೆಸ್ಟ್ ಮಕ್ಕಳೇ!

ಕೊರೋನಾ ಆತಂಕದ ನಡುವೆಯೇ ಇಂದಿನಿಂದ 2020-21ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಬಾರಿ ವಿಭಿನ್ನ ಹಾಗೂ ವಿಶೇಷವಾಗಿ ಪರೀಕ್ಷೆ ನಡೆಯುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಆತಂಕದ ನಡುವೆಯೇ ಇಂದಿನಿಂದ 2020-21ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಬಾರಿ ವಿಭಿನ್ನ ಹಾಗೂ ವಿಶೇಷವಾಗಿ ಪರೀಕ್ಷೆ ನಡೆಯುತ್ತಿದೆ. 

6 ದಿನ ಬದಲಾಗಿ 2 ದಿನ ಅಂದರೆ ಇವತ್ತು ಮತ್ತು ಜುಲೈ 22ಕ್ಕೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ. ಸರ್ಕಾರ ಹಾಗೂ ಎಸ್‍ಎಸ್‍ಎಲ್‍ಸಿ ಬೋರ್ಡ್ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಈ ಬಾರಿ ಒಟ್ಟು 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುತ್ತಿದ್ದು, ಕೋವಿಡ್ ನಡುವೆ ವಿದ್ಯಾರ್ಥಿಗಳ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. 

ಸಾಮಾಜಿಕ ಅಂತರ ಕಾಪಾಡಲು ಪರೀಕ್ಷಾ ಕೇಂದ್ರ ದುಪ್ಪಟ್ಟುಗೊಳಿಸಲಾಗಿದ್ದು, ಒಟ್ಟಾರೆ 4884 ಪರೀಕ್ಷಾ ಕೇಂದ್ರಗಳ 73,066 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗೆ ಕನಿಷ್ಟ ಒಂದು ಡೋಸ್ ಕೋವಿಡ್ ಲಸಿಕೆ ನೀಡುವ ಕಾರ್ಯ ಕೂಡ ಪೂರ್ಣಗೊಂಡಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆಯೇ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 

ಇಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯುತ್ತಿದ್ದು, ಜು.22 ರಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆಗಳು ನಡೆಯಲಿವೆ. 6 ದಿನಗಳ ಕಾಲ ನಡೆಸಲಾಗುತ್ತಿದ್ದ ಎಸ್ಎಸ್ಎಲ್'ಸಿ ಪರೀಕ್ಷೆಯನ್ನು ಈ ಬಾರಿ ಎರಡು ದಿನದಲ್ಲಿ ನಡೆಸಲಾಗುತ್ತಿದೆ. ಎರಡೂ ದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯುತ್ತಿದೆ. ಪ್ರತೀ ಕೇಂದ್ರದಲ್ಲೂ ಸ್ಯಾನಿಟೈಸರ್ ವ್ಯವಸ್ಥೆ, ಅಗತ್ಯವಿರುವ ವಿದ್ಯಾರಥಿಗಳಿಗೆ ಮಾಸ್ಕ್ ನೀಡಲಾಗುತ್ತಿದೆ.

3 ಭಾಷಾ ವಿಷಯಗಳಿಗೆ ಒಂದು ಪ್ರಶ್ನೆ ಪತ್ರಿಗೆ ಹಾಗೂ ಕೋರ್ ಸಬ್ಜೆಕ್ಟ್ ಗಳಿಗೆ ಮತ್ತೊಂದು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದ್ದು, ಪ್ರತಿ ಪ್ರಶ್ನೆ ಪತ್ರಿಯೆಲ್ಲಿ ಮೂರು ವಿಷಯಗಳಿಗೆ ತಲಾ 40 ಅಂಕಗಳ ಪ್ರಶ್ನೆಗಳುಳ್ಳ ಒಟ್ಟು 120 ಪ್ರಶ್ನೆಗಳನ್ನು ನೀಡಲಾಗಿರುತ್ತದೆ. ಯಾವುದೇ ಪ್ರಶ್ನೆಗಳಿಗೆ ಲಿಖಿತ ಉತ್ತರ ಬರೆಯುವಂತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಯಲ್ಲೇ ಪ್ರತಿ ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಲಾಗಿರುತ್ತದೆ. ಅವುಗಳಲ್ಲಿ ಸರಿಯಾದ ಉತ್ತರ ಸಂಖ್ಯೆಯನ್ನು ಒಎಂಆರ್ ಪ್ರತಿಯಲ್ಲಿ ಗುರುತಿಸಬೇಕಷ್ಟೆ. ಪ್ರತಿ ವಿಷಯದ ಪರೀಕ್ಷೆಗೂ ಬೇರೆ ಬೇರೆ ಬಣ್ಣದ ಒಎಂಆರ್ ಶೀಟ್ ಗಳನ್ನು ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com