ಕೋವಿಡ್ ಲಸಿಕೆ ಕಳ್ಳತನ: ಬೆಂಗಳೂರು ಮಹಿಳೆಯ ಮೊಬೈಲ್ ಸಂಖ್ಯೆ ಬಳಸಿ ಲಸಿಕೆ ಪಡೆದ ಗುಜರಾತ್ ಕುಟುಂಬ!

ಗುಜರಾತ್ ಮೂಲದ ಕುಟುಂಬವೊಂದು ಬೆಂಗಳೂರು ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆ ದಾಖಲಿಸಿ ಕೊರೋನಾ ಲಸಿಕೆ ಪಡೆದುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗುಜರಾತ್ ಮೂಲದ ಕುಟುಂಬವೊಂದು ಬೆಂಗಳೂರು ಮಹಿಳೆಯೊಬ್ಬರ ಮೊಬೈಲ್ ಸಂಖ್ಯೆ ದಾಖಲಿಸಿ ಕೊರೋನಾ ಲಸಿಕೆ ಪಡೆದುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

ನಗರದ ತ್ಯಾಗರಾಜನಗರ ನಿವಾಸಿಯಾಗಿರುವ 59 ವರ್ಷದ ಮಹಿಳೆಯೊಬ್ಬರಿಗೆ ಲಸಿಕೆ ಕೊಡಿಸುವ ಸಲುವಾಗಿ ಮಹಿಳೆಯ ಪುತ್ರ ಕೋವಿನ್ ಆ್ಯಪ್ ನಲ್ಲಿ ಮಾಹಿತಿ ನಮೂದಿಸಲು ಮುಂದಾಗಿದ್ದಾರೆ. ಈ ವೇಳೆ ಗುಜರಾತ್ ಮೂಲದ ಕುಟುಂಬವೊಂದು ಈಗಾಗಲೇ ಈ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಂಡಿರುವುದು ತಿಳಿದುಬಂದಿದೆ. 

ಭಾನುವಾರ ಸಂಜೆ ನನ್ನ ತಾಯಿಯ ಹೆಸರನ್ನು ಕೋವಿನ್ ಆ್ಯಪ್ ನಲ್ಲಿ ದಾಖಲಿಸಲು ಮುಂದಾಗಿದ್ದೆ. ಈ ವೇಳೆ ಮೊಬೈಲ್ ಸಂಖ್ಯೆ ಹಾಕಿದಾಗ ಒಟಿಪಿ ಬಂದಿತ್ತು. ಒಟಿಪಿ ಹಾಕಿದಾಗ ಗುಜರಾತ್ ನಲ್ಲಿ ನಾಲ್ಕು ಮಂದಿ ಈ ಸಂಖ್ಯೆಯಲ್ಲಿ ಏಪ್ರಿಲ್ 14 ರಂದು ಲಸಿಕೆ ಹಾಕಿಸಿಕೊಂಡಿರುವುದಾಗಿ ತಿಳಿದುಬಂದಿತ್ತು ಎಂದು ಮಹಿಳೆಯ ಪುತ್ರ ಅಭಿಷೇಕ್ ಭಾರದ್ವಾಜ್ ಅವರು ಹೇಳಿದ್ದಾರೆ. 

ಕೋವಿನ್ ಅಪ್ಲಿಕೇಶನ್ ಒಂದು ಫೋನ್ ಸಂಖ್ಯೆಯಲ್ಲಿ ಕೇವಲ ನಾಲ್ಕು ಫಲಾನುಭವಿಗಳು ಮಾತ್ರ ಲಸಿಕೆ ಪಡೆದುಕೊಳ್ಳಲು ಅವಕಾಶ ನೀಡಿದೆ. ಈಗಾಗಲೇ ಗುಜರಾತ್ ಮೂಲದ ಕುಟುಂಬ ಆ ನಾಲ್ಕು ಲಸಿಕೆಯನ್ನು ಮೊಬೈಲ್ ಸಂಖ್ಯೆ ದಾಖಲಿಸಿ ಪಡೆದುಕೊಂಡಿದ್ದು, ಇದೀಗ ಭಾರದ್ವಾಜ್ ಅವರ ತಾಯಿ ತಮ್ಮ ಮೊಬೈಲ್ ಸಂಖ್ಯೆ ದಾಖಲಿಸಿ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. 

ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಗಮನಕ್ಕೆ ತಂದಿದ್ದು, ಆರೋಗ್ಯ ಸಹಾಯವಾಣಿಯನ್ನೂ ಸಂಪರ್ಕಿಸಿದ್ದೇನೆ. ಸಹಾಯವಾಣಿ ಸಿಬ್ಬಂದಿಗಳು ಶೀಘ್ರಗತಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆಂದು ಭಾರದ್ವಾಜ್ ಅವರು ಹೇಳಿದ್ದಾರೆ. 

ನೇರವಾಗಿ ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದರೆ, ಒಟಿಪಿ ಅಗತ್ಯವಿರುವುದಿಲ್ಲ. ಹೀಗಾಗಿಯೇ ಗುಜರಾತ್ ಮೂಲದ ಕುಟುಂಬ ಲಸಿಕೆ ಪಡೆದುಕೊಂಡಿದೆ. ಇಂತಹ ವಂಚನೆ ಚಟುವಟಿಕೆಗಳನ್ನು ನಿಲ್ಲಿಸಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 

ಇದೀಗ ಭಾರದ್ವಾಜ್ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ತಾಯಿಯ ಹೆಸರನ್ನು ದಾಖಲಿಸಿದ್ದು, ನಮ್ಮ ಬಳಿ ಎರಡು ಫೋನ್ ಗಳಿವೆ ಹೀಗಾಗಿ ಬೇರೆ ಸಂಖ್ಯೆ ಮೂಲಕ ಹೆಸರು ದಾಖಲು ಮಾಡಿದ್ದೇನೆ. ಆದರೆ, ಕೇವಲ ಒಂದೇ ಮೊಬೈಲ್ ಸಂಖ್ಯೆಯುಳ್ಳ ಕುಟುಂಬದವರು ಏನು ಮಾಡಬೇಕೆಂದು ಭಾರದ್ವಾಜ್ ಅವರು ಪ್ರಶ್ನಿಸಿದ್ದಾರೆ. 

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಲು ಯಾವುದೇ ಆರೋಗ್ಯಾಧಿಕಾರಿಗಳೂ ಸಂಪರ್ಕಕ್ಕೆ ಸಿಕ್ಕಿಲ್ಲ. ಇದೇ ರೀತಿಯ ಮತ್ತೊಂದು ಘಟನೆ ವಿದ್ಯಾರಣ್ಯಪುರದಲ್ಲೂ ನಡೆದಿದ್ದು, ಮಹಿಳೆಯೊಬ್ಬರ ಎರಡನೇ ಡೋಸ್ ಲಸಿಕೆಯನ್ನು ಗುಜರಾತ್ ಮೂಲದ ವ್ಯಕ್ತಿಯೊಬ್ಬರು ಪಡೆದುಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಈ ಹಿಂದೆ ವರದಿ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com