ಮಕ್ಕಳಲ್ಲಿ ಭಯವನ್ನಲ್ಲ, ಆತ್ಮವಿಶ್ವಾಸ ತುಂಬೋಣ; ಸಂದರ್ಶನದಲ್ಲಿ ಸಚಿವ ಸುರೇಶ್ ಕುಮಾರ್
ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ ಎಸ್ಎಸ್ಎಲ್'ಸಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮರ್ ಅವರು ಸಮರ್ಥಿಸಿಕೊಂಡಿದ್ದು, ತಜ್ಞರು ಹಾಗೂ ಸಂಬಂಧಪಟ್ಟವರಿಂದ ಪ್ರತಿಕ್ರಿಯೆ ಪಡೆದೇ ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
Published: 13th June 2021 08:35 AM | Last Updated: 14th June 2021 03:17 PM | A+A A-

ಸುರೇಶ್ ಕುಮಾರ್
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ ಎಸ್ಎಸ್ಎಲ್'ಸಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮರ್ ಅವರು ಸಮರ್ಥಿಸಿಕೊಂಡಿದ್ದು, ತಜ್ಞರು ಹಾಗೂ ಸಂಬಂಧಪಟ್ಟವರಿಂದ ಪ್ರತಿಕ್ರಿಯೆ ಪಡೆದೇ ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಭದಲ್ಲಿ ಈ ಕುರಿತು ಮಾತನಾಡಿರುವ ಅವರು, ಈ ಸಂದರ್ಭದಲ್ಲಿ ಮಕ್ಕಳಲ್ಲಿ ಭಯವಲ್ಲದೆ, ಆತ್ಮವಿಶ್ವಾಸವನ್ನು ತುಂಬೋಣ. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಇದೂ ಒಂದು ಪ್ರಯತ್ನವೆಂದು ಹೇಳಿದ್ದಾರೆ.
ದ್ವಿತೀಯ ಪಿಯುಸಿ ಮತ್ತು ಇತರೆ ಪರೀಕ್ಷೆಗಳನ್ನು ರದ್ದುಗೊಳಿಸಿದಾಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ಏಕೆ ಮುಖ್ಯವಾಯಿತು?
ಕೋವಿಡ್ ನಿಂದಾಗಿ ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಹಿಂದಿನ ಸಾಲಿನ (9ನೇ ತರಗತಿ) ಕಲಿಕಾ ಗುಣಮಟ್ಟದ ಮಾನದಂಡ ನಮ್ಮಲ್ಲಿ ಇಲ್ಲದಿರುವ ಕಾರಣ ಎಸ್ಎಸ್ಎಲ್'ಸಿ ಪರೀಕ್ಷೆ ನಡೆಸಲೇಬೇಕಾಗಿದೆ. ಕೊರೋನಾ ಕಾರಣದಿಂದಾಗಿ ಕಳೆದ ವರ್ಷ 9ನೇ ತರಗತಿ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಲಿಲ್ಲ. ಪರೀಕ್ಷೆ ನಡೆಸದೆಯೇ ಎಲ್ಲಾ ವಿದ್ಯಾರ್ಥಿಗಳನ್ನೂ ಉತ್ತೀರ್ಣರಾಗುವಂತೆ ಮಾಡಲಾಗಿತ್ತು.
ಪಿಯುಸಿಯಲ್ಲಿ ವಿಜ್ಞಾನ, ಕಲೆ ಅಥವಾ ವಾಣಿಜ್ಯ ಯಾವುದನ್ನು ಮುಂದುವರಿಸಬೇಕೆಂಬುದನ್ನು ವಿದ್ಯಾರ್ಥಿಗಳು ನಿರ್ಧರಿಸಬೇಕು ಮತ್ತು ಆಯ್ಕೆ ಮಾಡುವ ವಿಶ್ವಾಸ ಅವರಲ್ಲಿರಬೇಕು. ಅವುಗಳನ್ನು ನಿರ್ಣಯಿಸಲು ನಮಗೆ ಬೇರೆ ಆಧಾರಗಳಿದ್ದರೆ, ನಾವು ಪರೀಕ್ಷೆಗಳನ್ನು ನಡೆಸಲು ನಿರ್ಧರಿಸುತ್ತಿರಲಿಲ್ಲ. ಸಿಬಿಎಸ್‌ಇಯೊಂದಿಗೆ ನಮ್ಮನ್ನು ಹೋಲಿಕೆ ಮಾಡುವುದು ಸರಿಯಲ್ಲ. ಅವರಲ್ಲಿ ಮಕ್ಕಳನ್ನು ನಿಯತಕಾಲಿಕವಾಗಿ ಮೌಲ್ಯಮಾಪನ ಮಾಡುವ ವ್ಯವಸ್ಥೆಗಳಿವೆ. ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ. ಈ ವರ್ಷದಿಂದ ಅದನ್ನು ಪರಿಚಯಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಮಾಜಿ ಶಿಕ್ಷಣ ಸಚಿವರು, ಎಂಎಲ್‌ಸಿಗಳು, ಬೋಧನಾ ಅಧ್ಯಾಪಕರು ಮತ್ತು ಪೋಷಕರೊಂದಿಗೆ ವ್ಯಾಪಕ ಚರ್ಚೆ ನಡೆಸಿದ ನಂತರವೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.. ಅಂತಿಮವಾಗಿ, ಇಲಾಖೆಯ ನಿರ್ಧಾರವು ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇಷ್ಟವಾಗದಿರಬಹುದು, ಆದರೆ ನಾವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆಂದು ಹೇಳಿದ್ದಾರೆ.
ಪಿಯುಸಿ ಮತ್ತು ಎಸ್ಎಸ್ಎಲ್'ಸಿ ಪರೀಕ್ಷೆಗಳಿಗೆ ಒಂದೇ ಲಾಜಿಕ್ ಬಳಸಬೇಕಿತ್ತು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಹೇಳುತ್ತಿವೆ?
ಈ ಕುರಿತು (ಕಾಂಗ್ರೆಸ್ ನಾಯಕರು) ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮತ್ತು ಮಾಜಿ ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದೇನೆ. ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಸಿಯ ಫಲಿತಾಂಶದ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ನಿರ್ಧರಿಸಲಾಗುತ್ತದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಿಇಟಿ, ನೀಟ್, ಜೆಇಇ ಮತ್ತು ಇತರ ಪ್ರವೇಶ ಪರೀಕ್ಷೆಗಳನ್ನೂ ಕೂಡ ಬರೆಯುತ್ತಾರೆ. ಆದರೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಂತಹ ಪ್ರವೇಶ ಪರೀಕ್ಷೆಗಳಿಲ್ಲ. ಹೀಗಾಗಿ ಎಸ್‌ಎಸ್‌ಎಲ್‌ಸಿಗೆ ಎರಡು ದಿನಗಳ ವಸ್ತುನಿಷ್ಠ ಪ್ರಕಾರದ ಪರೀಕ್ಷೆಯನ್ನು ನಡೆಸಲು ನಾವು ನಿರ್ಧರಿಸಿದ್ದೇವೆ. ಒಂದು ದಿನ, ಕೋರ್ ವಿಷಯಗಳು ಮತ್ತು ಮರುದಿನ ಭಾಷಾ ವಿಷಯಗಳ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ.
ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನೂ ಕೂಡ ಬಿಡುಗಡೆ ಮಾಡಿದ್ದೇವೆ ಮತ್ತು ಬಿಇಒ ಮಟ್ಟದ ತರಬೇತಿ ಪ್ರಾರಂಭವಾಗಿದೆ. ಈ ವರ್ಷ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣರಾಗುವಂತೆ ಮಾಡಲಾಗುತ್ತದೆ. ನಾವು ಅವರಲ್ಲಿ ವಿಶ್ವಾಸವನ್ನು ತುಂಬಬೇಕೆ ವಿನಃ ಆತಂಕವನ್ನು ಸೃಷ್ಟಿಸಬಾರದು. ಪರೀಕ್ಷೆ ಕೂಡ ಅವರಲ್ಲಿ ಆತ್ಮವಿಶ್ವಾಸ ತುಂಬಲು ಒಂದು ಪ್ರಯತ್ನವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಈ ಬಾರಿ ಪರಿಸ್ಥಿತಿ ಉತ್ತಮವಾಗಿಲ್ಲ. ಈಗಾಗಲೇ ತಜ್ಞರು ಕೂಡ ಕೊರೋನಾ 3ನೇ ಅಲೆ ಕುರಿತು ಮಾತನಾಡುತ್ತಿದ್ದಾರೆ. ಈ ಕುರಿತು ಎದುರಾಗುವ ಸವಾಲುಗಳೇನು?
ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ತಜ್ಞರೊಂದಿಗೆ ಮಾತುಕತೆ ನಡೆಸಿದ್ದೆವು. ಈಗಲೇ ನಾವು ಪರೀಕ್ಷೆಗಳನ್ನು ನಡೆಸುತ್ತಿಲ್ಲ. ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಪರೀಕ್ಷೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಗಳನ್ನು ಪಡೆದುಕೊಳ್ಳಲಾಗುತ್ತದೆ.
ದೊಡ್ಡವರಿಗೆ ಹೋಲಿಕೆ ಮಾಡಿದರೆ ಮಕ್ಕಳು ಮಾರ್ಗಸೂಚಿಗಳನ್ನು ಶಿಸ್ತುಬದ್ಧರಾಗಿ ಪಾಲನೆ ಮಾಡುತ್ತಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ನಾವು ಪರೀಕ್ಷೆಗಳನ್ನು ನಡೆಸುತ್ತೇವೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಪರಿಸ್ಥಿತಿಯನ್ನು ಅವಲಂಬಿಸಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಸಕ್ತ ಸಾಲು ಪರೀಕ್ಷಾ ಕೊಠಡಿಗಳ ಸಂಖ್ಯೆಯನ್ನು 6 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಮೇಲ್ವಿಚಾರಕರ ಸಂಖ್ಯೆಯನ್ನೂ ಹೆಚ್ಚಿಸಿದ್ದೇವೆ. ಕಳೆದ ವರ್ಷ ಒಂದು ಕೊಠಡಿಯಲ್ಲಿ 18 ಮಕ್ಕಳನ್ನು ಕೂರಿಸಲಾಗಿತ್ತು. ಈ ಬಾರಿ 10-12 ಮಕ್ಕಳನ್ನು ಕೂರಿಸಲಾಗುತ್ತದೆ. ವಿದ್ಯಾರ್ಥಿಗಳ ನಡುವೆ 6 ಅಡಿ ಅಂತರ ಇರುವಂತೆ ನೋಡಿಕೊಳ್ಳಲಾಗುತ್ತದೆ. ಮಕ್ಕಳಿಗೆ ಎನ್95 ಮಾಸ್ಕ್ ಗಳನ್ನೂ ನೀಡಲಾಗುತ್ತದೆ. ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ಪರಿವೀಕ್ಷಕರೇ ಪರೀಕ್ಷಾ ಕೊಠಡಿ ಪ್ರವೇಶಿಸಲಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡದ ಕಾರಣ, ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯುವಲ್ಲಿನ ಎದುರಾಗುವ ಸವಾಲುಗಳಾವುವು?
ಮಕ್ಕಳ ಲಸಿಕೆಗಳು ಇನ್ನೂ ಕ್ಲಿನಿಕಲ್ ಪರೀಕ್ಷೆಯ ಹಂತದಲ್ಲಿವೆ. ಜುಲೈ 1 ರಿಂದ ಶೈಕ್ಷಣಿಕ ವರ್ಷ ಆರಂಭಿಸಲು ನಿರ್ಧರಿಸಿದ್ದೇವೆ. ಪರಿಸ್ಥಿತಿಗೆ ಅನುಸಾರ ಮತ್ತೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಉಪ ಚುನಾವಣೆ ವೇಳೆ ಕರ್ತವ್ಯಕ್ಕೆ ನಿಯೋಜಿಸಿದ್ದ ಹಲವು ಶಿಕ್ಷಕರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರ ಯಾವ ರೀತಿಯ ಸಹಾಯ ಮಾಡುತ್ತಿದೆ?
ಮೃತಪಟ್ಟ ಎಲ್ಲಾ ಶಿಕ್ಷಕರನ್ನೂ ಕೋವಿಡ್ ವಾರಿಯರ್ ಎಂದು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಇದಷ್ಟೇ ಅಲ್ಲದೆ, ಕೋವಿಡ್-19 ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರನ್ನೂ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಲಾಗುತ್ತದೆ. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಶಿಕ್ಷಣ ಸಂಸ್ಥೆಗಳು ಬಂದ್ ಆಗಿರುವ ಕಾರಣ ಮಕ್ಕಳು ಶಾಲೆಗಳನ್ನು ಬಿಡುತ್ತಿರುವ ಸಂಖ್ಯೆ ಏರಿಕೆಯಾಗುತ್ತಿದೆ. ಈ ಸಮಸ್ಯೆ ಎದುರಿಸಲು ಸರ್ಕಾರ ಏನು ಮಾಡುತ್ತದೆ?
ಈ ಸಮಸ್ಯೆ ಕಳೆದ ವರ್ಷ ಕೂಡ ಇತ್ತು. ಬಾಲ ಕಾರ್ಮಿಕರು ಹಾಗೂ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿರುವ ಕುರಿತಂತೆ ನಾನು ಮಾತನಾಡಿದ್ದೇನೆ. ಈ ಬಗ್ಗೆ ನಮಗೂ ಕಳವಳವಿದೆ. ಸೋಂಕು ಹೆಚ್ಚಾಗಿರುವ ಸಂದರ್ಭದಲ್ಲಿ ಶಾಲೆಗಳನ್ನು ಪುನರಾರಂಭಿಸುವುದು ಅತ್ಯಂತ ಅಪಾಯಕರವಾಗಿರುತ್ತದೆ. ಅಂತಿಮವಾಗಿ, ಒಂದೇ ಒಂದು ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿದೆ. ಅದು ನಮ್ಮ ಧ್ಯೇಯವಾಗಿದೆ.
ನಮ್ಮಲ್ಲಿರುವ ಎಲ್ಲಾ ಮಕ್ಕಳೂ ಆನ್'ಲೈನ್ ಶಿಕ್ಷಣ ಪಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹಲವು ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆಗಳಿವೆ. ಚಾಮರಾಜನಗರ ಹಲವು ಗ್ರಾಮಗಳಿಗೆ ನಾನು ಭೇಟಿ ನೀಡಿದ್ದೇನೆ. ಬಿಎ ಹಾಗೂ ಬಿಎಸ್'ಸಿ ವಿದ್ಯಾರ್ಥಿಗಳಿಗೂ ನೆಟ್ ವರ್ಕ್ ಸಮಸ್ಯೆಗಳು ಎದುರಾಗಿರುವುದನ್ನು ನೋಡಿದ್ದೇನೆ. ಮಕ್ಕಳಿಗೆ ತಾಂತ್ರಿಕ ಸೌಲಭ್ಯ ಒದಗಿಸುವ ಸ್ಥಿತಿಯಲ್ಲಿ ಪೋಷಕರೂ ಇಲ್ಲ. ಮನೆಯಲ್ಲಿ ಒಂದು ಮೊಬೈಲ್ ಇದ್ದರೆ ಅದನ್ನು ಪೋಷಕರು ಬಳಕೆ ಮಾಡುತ್ತಿರುತ್ತಾರೆ. ಕೆಲಸದಿಂದ ಮನೆಗೆ ಹಿಂತಿರುಗಿ ಬಂದಾಗಲೇ ಮಕ್ಕಳಿಗೆ ಮೊಬೈಲ್ ಬಳಕೆ ಮಾಡುವ ಅವಕಾಶ ಸಿಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕುರಿತು ಗಮನ ಹರಿಸುವಂತೆ ತಜ್ಞರ ಸಮಿತಿಗೆ ತಿಳಿಸಿದ್ದೇವೆ. ಸಮಿತಿಯಲ್ಲಿ ನಿಮ್ಹಾನ್ಸ್ ತಜ್ಞರೂ ಕೂಡ ಇದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶಗಳ ಪ್ರಕಟಿಸಲು ಮಾನದಂಡಗಳನ್ನು ಇಲಾಖೆ ಅಂತಿಮಗೊಳಿಸಿದೆಯೇ?
ಫಲಿತಾಂಶದ ಸೂತ್ರಗಳ ಪರಿಶೀಲಿಸಲು ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಸೇರಿದಂತೆ ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಮೊದಲಿಗೆ, ಪ್ರಥಮ ಪಿಯುಸಿ ಫಲಿತಾಂಶವನ್ನು ಮಾತ್ರ ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ನಂತರ, ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಕೂಡ ಸೇರಿಸುವಂತೆ ಸಲಹೆಗಳು ಬಂದಿತ್ತು. ಹೀಗಾಗಿ ಇದೀದಗ ಪ್ರಥಮ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳಿಗೆ ಯಾವ ರೀತಿಯ ಮೌಲ್ಯ ನೀಡಬಹುದು ಎಂಬುದನ್ನು ಸಮಿತಿ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.