ಮೊಬೈಲಿನಲ್ಲಿ ಮಾತನಾಡಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಪತಿ ಹತ್ಯೆಗೆ ಪತ್ನಿಯಿಂದಲೇ ಸುಪಾರಿ!

ಪ್ರತಿ ದಿನ ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯನ್ನೇ ಕೊಲ್ಲಲು ರೂ.30 ಸಾವಿರ ಸುಪಾರಿ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಪ್ರತಿ ದಿನ ಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಹರಟುತ್ತಿದ್ದ ಪತ್ನಿಗೆ ಬುದ್ಧಿ ಹೇಳಿದ್ದಕ್ಕೆ ಪತಿಯನ್ನೇ ಕೊಲ್ಲಲು ರೂ.30 ಸಾವಿರ ಸುಪಾರಿ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.

ತೇಜಸ್ವಿನಿ ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ. ಈಕೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬುವವನನ್ನು ಆರು ವರ್ಷದ ಹಿಂದೆ ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಸಮಯ ಕಳೆಯಲು ನೆಂಟರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಳು. ಇದರಿಂದ ಬೇಸತ್ತಿದ್ದ ಅಂಕುಷ ರಾಮಾ ಸುತಾರ್ ಅವರು ಹೆಚ್ಚು ಮೊಬೈಲ್ ನಲ್ಲಿ ಮಾತನಾಡದಂತೆ ಬುದ್ಧಿ ಹೇಳಿದ್ದಾನೆ. 

ಇದರಿಂದ ಬೇಸರಗೊಡ ತೇಜಸ್ವಿನಿ ಆತನನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾಳೆ. ಇದರಂತೆ ಗಣೇಶ್ಪುರದಲ್ಲಿರುವ ತನ್ನ ಸ್ನೇಹಿತೆ ವನಿತಾ ಎಂಬಾಕೆಯನ್ನು ಸಂಪರ್ಕಿಸಿ ಕೊಲೆಗೆ ಸುಪಾರಿ ನೀಡಲು ಸಂಚು ರೂಪಿಸಿದ್ದಾರೆ. ಹತ್ಯೆಯಾದ ಬಳಿಕ ಹಂತಕರಿಗೆ ರೂ.30,000 ನೀಡುವುದಾಗಿ ತೇಜಸ್ವಿನಿ ವನಿತಾಗೆ ತಿಳಿಸಿದ್ದಾಳೆ. 

ಇದರಂತೆ ಕೊಲೆ ಮಾಡಲು ಗಣೇಶಅ ಶಾಂತರಾಮ್ ಪಾಟೀಲ್ ಹಾಗೂ ಮತ್ತೊಬ್ಬ ಅಪ್ರಾಪ್ತ ಬಾಲಕನಿಗೆ ಸುಪಾರಿ ನೀಡಲಾಗಿದೆ. ಇದರಂತೆ ಕಳೆದ ಶುಕ್ರವಾರ ರಾತ್ರಿ ಹತ್ಯೆ ಮಾಡಲು ಇಬ್ಬರೂ ತೇಜಸ್ವಿನಿ ಮನೆಗೆ ಬಂದಿದ್ದಾರೆ. ಉಸಿರುಕಟ್ಟಿಸಿ ಸುತಾರ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ, ಕೂಡಲೇ ಸುತಾರ್ ಅವರು ಕೂಗಾಡಿದ್ದು, ನೆರೆಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಕೂಡಲೇ ಮೂವರೂ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. 

ಬಳಿಕ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ದಾಂಡೇಲಿ ಪೊಲೀಸರು ಮೊದಲಿಗೆ ತೇಜಸ್ವಿನಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ನಂತರ ಎರಡು ದಿನಗಳಲ್ಲಿ ಶಾಂತರಾಮ್ ಹಾಗೂ ವನಿತಾ ಇಬ್ಬರನ್ನೂ ಬಂಧಿಸಿದ್ದಾರೆ. ಬಳಿಕ ಅಪ್ರಾಪ್ತ ಬಾಲಕನನ್ನೂ ಪೊಲೀಸರು ಬಂಧಿನಕ್ಕೊಳಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com