ಜಿನೋಮ್ ಸ್ವೀಕ್ವೆನ್ಸಿಂಗ್ ಟೆಸ್ಟ್ ನಡೆಸಲು ಬಿಬಿಎಂಪಿಗೆ ಕೇಂದ್ರ ಸರ್ಕಾರದ ಸೂಚನೆ

ಜಿನೋಮ್ ಸ್ವೀಕ್ವೆನ್ಸಿಂಗ್ ಟೆಸ್ಟ್ ನಡೆಸಲು ನಮಗೆ ಕೇಂದ್ರ ಸರ್ಕಾರದಿಂದ ಸೂಚನೆ ಇದೆ‌ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಿನೋಮ್ ಸ್ವೀಕ್ವೆನ್ಸಿಂಗ್ ಟೆಸ್ಟ್ ನಡೆಸಲು ನಮಗೆ ಕೇಂದ್ರ ಸರ್ಕಾರದಿಂದ ಸೂಚನೆ ಇದೆ‌ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಕೋವಿಡ್ 2ನೇ ಅಲೆ ಪ್ರಭಾವ ಕಡಿಮೆಯಾಗುತ್ತಿರುವ ಹೊತ್ತಿನಲ್ಲೇ ಇದೀಗ ಡೆಲ್ಟಾ ಪ್ಲಸ್ ವೈರಸ್ ರೂಪಾಂತರಿ ಸೋಂಕು ಇದೀಗ ವ್ಯಾಪಕ ಆತಂಕ ಸೃಷ್ಟಿಸಿದೆ. ಇದುವರೆಗೆ ಪತ್ತೆಯಾದ ಕೊರೊನಾವೈರಸ್ ಡೆಲ್ಟಾ ಪ್ಲಸ್ ರೂಪಾಂತರವನ್ನು ಕೇಂದ್ರ ಆರೋಗ್ಯ ಸಚಿವಾಲಯವು ಕಾಳಜಿಯ ರೂಪಾಂತರವೆಂದು  ವರ್ಗೀಕರಿಸಿದ್ದು, ರೂಪಾಂತರ ಪತ್ತೆಯಾದ ಕ್ಲಸ್ಟರ್‌ಗಳಲ್ಲಿ ತಕ್ಷಣದ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಗಳಿಗೆ ನಿರ್ದೇಶಿಸಲಾಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ಬಿಬಿಎಂಪಿ ಆಯುಕ್ತ ಗೌರವ ಗುಪ್ತಾ ಅವರು, ಕೊರೊನಾ ವೈರಾಣುವಿನ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ರೂಪಾಂತರಿ ತಳಿಗಳು ಪತ್ತೆಯಾಗುತ್ತಿರುವುದರಿಂದ ಬಿಬಿಎಂಪಿಯೂ ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗಳನ್ನು ನಡೆಸಲಿದೆ. ಕೊರೊನಾ ಸೋಂಕಿತರ ಪ್ರತಿ ಮಾದರಿಯು  'ಜಿನೋಮ್ ಸೀಕ್ವೆನ್ಸಿಂಗ್'‌ಗೆ ಒಳಪಡುತ್ತದೆ ಎಂದು ಹೇಳಿದ್ದಾರೆ.

'ಕೊರೊನಾ ವೈರಸ್ ಹಲವು ವಿಧದಲ್ಲಿ ರೂಪಾಂತರಗೊಳ್ಳುತ್ತಿದ್ದು, ಅದಕ್ಕೆ ತಕ್ಕ ಚಿಕಿತ್ಸೆ ನೀಡುವ ಅಗತ್ಯವಿದೆ. ಡೆಲ್ಟಾ ವೈರಸ್ ಅನ್ನು ಭಾರತದಲ್ಲಿ ಪತ್ತೆ ಹಚ್ಚಲಾಗಿದ್ದು, ಈಗ ಹಲವು ದೇಶಗಳಲ್ಲಿ ಈ ವೈರಸ್ ಕಂಡು ಬಂದಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಬಂದಿದೆ ಎಂಬುದನ್ನು  ಮಾಧ್ಯಮಗಳಲ್ಲಿ ತಿಳಿದುಕೊಂಡಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರಿಕ್ಷಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲು ಆರೋಗ್ಯ ತಜ್ಞರು ಸೂಚಿಸಿದರೆ, ಬಿಬಿಎಂಪಿ ಜಾರಿಗೆ ತರಲು ಬದ್ಧವಾಗಿದೆ. ಇನ್ನು ನಿತ್ಯ ಪಾಸಿಟಿವ್ ಪ್ರಕರಣಗಳನ್ನು ನಾವು ವಿಶೇಷವಾಗಿ ಗಮನಿಸುತ್ತಿದ್ದೇವೆ. ರೂಪಾಂತರ  ವೈರಸ್‌ನಿಂದ ಸಮಸ್ಯೆಯಾಗದಂತೆ ಕ್ರಮವಹಿಸಿದ್ದು, ಅಗತ್ಯಬಿದ್ದರೆ, ಆರ್‌ಟಿಪಿಸಿಆರ್ ಕಡ್ಡಾಗೊಳಿಸಲಾಗುವುದು ಎಂದಿದ್ದಾರೆ.

ಡೆಲ್ಟಾ ಪ್ಲಸ್ ಮತ್ತು ಡೆಲ್ಟಾ ವೈರಸ್ ನಡುವೆ ಏನು ವ್ಯತ್ಯಾಸವಿದೆ, ಯಾವ ರೀತಿ ರೂಪಾಂತರಗೊಳ್ಳುತ್ತಿದೆ, ಚಿಕಿತ್ಸೆ ಹೇಗೆ ಎಂಬುದರ ಬಗ್ಗೆ ತಜ್ಞರ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆರೋಗ್ಯ ತಜ್ಞರ ಸಬೆ ನಡೆಯಲಿದ್ದು, ಅಲ್ಲಿ ಡೆಲ್ಟಾ-ಪ್ಲಸ್ ಹಾಗೂ ಮೂರನೇ  ಅಲೆಯಲ್ಲಿ ಮಕ್ಕಳ ಮೇಲಿನ ಪರಿಣಾಮ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಕೋವಿಡ್ ಲಸಿಕಾ ಉತ್ಸವಕ್ಕೆ ಉತ್ತಮ ಸ್ಪಂದನೆ
ಅಂತೆಯೇ ಬಿಬಿಎಂಪಿಯಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಲಸಿಕೆ ಉತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಒಟ್ಟು 68 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ, 1,68,958 ಮಂದಿಗೆ ಲಸಿಕೆ ನೀಡುವ ಮೂಲಕ ಅಭಿಯಾನ ಯಶಸ್ವಿಯಾಗಿದೆ  ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com