ಕಲ್ಯಾಣ ಕರ್ನಾಟಕಕ್ಕೆ 1493 ಕೋಟಿ ರೂ. ಕ್ರಿಯಾಯೋಜನೆಗೆ ರಾಜ್ಯಪಾಲರ ಅನುಮೋದನೆ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆ ರೂಪಿಸಲು ರೂ. 1492.97 ಕೋಟಿ ರೂ. ಬಳಕೆ ಯೋಜನೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆ ರೂಪಿಸಲು ರೂ. 1492.97 ಕೋಟಿ ರೂ. ಬಳಕೆ ಯೋಜನೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

ಗಿರಿಜನ ಉಪಯೋಜನೆಗೆ 100 ಕೋಟಿ ರೂ., ವಿಶೇಷ ಘಟಕ (ಎಸ್‍ಸಿಪಿ) 300 ಕೋಟಿ ರೂ. ಹಾಗೂ ಸಾಮಾನ್ಯ ಯೋಜನೆಗೆ 1092.97 ರೂ. ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅದರಂತೆ ಕ್ರಿಯಾಯೋಜನೆ ರೂಪಿಸಲು ರಾಜ್ಯಪಾಲರಿಂದ ಗ್ರೀನ್‍ ಸಿಗ್ನಲ್ ದೊರೆತಿದೆ. 

 2021-22 ನೇ ಸಾಲಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಒದಗಿಸಲಾಗಿರುವ ರೂ. 1492.97 ಕೋಟಿ ಅನುದಾನಕ್ಕೆ ಮಂಡಳಿ ವ್ಯಾಪ್ತಿಯ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ನಂಜುಂಡಪ್ಪ ವರದಿ ಆದರಿಸಿ ಅನುದಾನ ಹಂಚಿಕೆ ಮಾಡಲಾಗಿದೆ.

ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳಡಿ ಮಂಡಳಿಯ ಒಟ್ಟು ಅನುದಾನದ ಶೇ. 84 ರಷ್ಟು ಅನುದಾನದಲ್ಲಿ ಮೈಕ್ರೋ ಯೋಜನೆಗೆ ಶೇ. 70 ರಷ್ಟು ಅನುದಾನವನ್ನು ತಾಲ್ಲೂಕುವಾರು ಹಂಚಿಕೆ ಮಾಡುವುದು, ಮ್ಯಾಕ್ರೋ ಯೋಜನೆಗೆ ಶೇ. 30 ರಷ್ಟು ಅನುದಾನವನ್ನು ಸಾಮಾಜಿಕ ಹಾಗೂ ಸಾಮಾಜಿಕೇತರ ಬದಲು ಜಿಲ್ಲೆಯ ಅಭಿವೃದ್ಧಿಗಾಗಿ ಅಗತ್ಯವಿರುವ ಬೃಹತ್ ಮೊತ್ತದ 3 ರಿಂದ 4 ಯೋಜನೆಗಳಿಗೆ ಮಾತ್ರ ಹಂಚಿಕೆ ಮಾಡತಕ್ಕದ್ದು ಎಂದು ಹೇಳಲಾಗಿದೆ.

 ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯಗಳು, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ನೀರಾವರಿ, ಕುಡಿಯುವ ನೀರು, ರಸ್ತೆ ಮತ್ತು ಸಂಪರ್ಕ, ಅಂತರ್ಜಲ ಸಂರಕ್ಷಣೆ, ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಆದ್ಯತೆಗಳನುಗುಣವಾಗಿ ಯೋಜನೆ ಅನುಷ್ಠಾನಗೊಳಿಸತಕ್ಕದ್ದು, ವಿಶೇಷ ಘಟಕ ಯೋಜನೆ (ಎಸ್‍ಸಿಪಿ) ಮತ್ತು ಗಿರಿಜನ ಉಪಯೋಜನೆ (ಟಿಎಸ್‍ಪಿ) ಯಡಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆಗೆ ಕ್ರಿಯಾಯೋಜನೆಯನ್ನು ಪ್ರತ್ಯೇಕವಾಗಿ ರೂಪಿಸಿ ಅನುಷ್ಟಾನಗೊಳಿಸಬೇಕಿದೆ ಎಂದು ತಿಳಿಸಲಾಗಿದೆ. 

 ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಅನುದಾನ ವಿನಿಯೋಗಿಸಲಾಗುವುದು. ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ. ಕಳಪೆ ಕಾಮಗಾರಿ ನಡೆದು ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಕಣ್ಣಿಗೆ ಕಾಣುವಂತಹ ಬಹು ಜನೋಪಯೋಗಿ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಅಂಕಿ ಅಂಶ ಖಾತೆ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

ಡಾ. ನಂಜುಂಡಪ್ಪ ವರದಿ ಅನ್ವಯ ಕಲ್ಯಾಣ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 32 ತಾಲ್ಲೂಕುಗಳು ಹಿಂದುಳಿದಿವೆ. ಆ ತಾಲ್ಲೂಕುಗಳ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರಸಕ್ತ ಸಾಲಿನಲ್ಲೂ ಸುಮಾರು ಒಂದುವರೆ ಸಾವಿರ ಕೋಟಿ ಅನುದಾನ ನೀಡಿದ್ದು, ಸಮರ್ಪಕವಾಗಿ ವಿನಿಯೋಗವಾಗಬೇಕು. ನಿಗದಿತ ಅವಧಿಯೊಳಗೆ ಪೂರ್ಣ ಅನುದಾನವನ್ನು ವೆಚ್ಚಭರಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com