ನೂತನ ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯ: ರೈತರಿಂದ ರಾಜಭವನಕ್ಕೆ ಮುತ್ತಿಗೆ, ವಶಕ್ಕೆ ಪಡೆದ ಪೊಲೀಸರು 

ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯದ ರೈತರು ಶನಿವಾರ ರಾಜಭವನ ಚಲೋ ನಡೆಸಿದ್ದಾರೆ.
ರೈತರ ಪ್ರತಿಭಟನೆಯ ಸಾಂದರ್ಭಿಕ ಚಿತ್ರ
ರೈತರ ಪ್ರತಿಭಟನೆಯ ಸಾಂದರ್ಭಿಕ ಚಿತ್ರ

ಬೆಂಗಳೂರು:  ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯದ ರೈತರು ಶನಿವಾರ ರಾಜಭವನ ಚಲೋ ನಡೆಸಿದ್ದಾರೆ.

ರಾಜಭವನಕ್ಕೆ ಮುತ್ತಿಗೆ ಹಾಕಿ ಸರ್ಕಾರದ ಗಮನ ಸೆಳೆಯುವ ಮೂಲಕ ಕೇಂದ್ರ ಸರ್ಕಾರ ನೂತನ ತಿದ್ದುಪಡಿ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದು, ಸರ್ಕಾರ ಹಿಂತೆಗೆದುಕೊಳ್ಳುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. 
ಇಂದು ಬೆಳಗ್ಗೆ ರಾಜಭವನ ಚಲೋ ಕೈಗೊಂಡು ಮೆರವಣಿಗೆ ಬಂದಿದ್ದ ರೈತರು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ರೈತರನ್ನು ತಡೆದು ವಶಕ್ಕೆ ಪಡೆದರು.

ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾ ನಿರತ ರೈತರು ಪಟ್ಟು ಹಿಡಿದಿದ್ದಾರೆ.

ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸುವುದು ರಾಜಭವನ ಚಲೋದ ಅಜೆಂಡಾವಾಗಿದೆ.

ತಮ್ಮ ರಾಜಭವನ ಚಲೋ ಬಗ್ಗೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ರೈತರ ಬೆಳೆಗಳಿಗೆ ಶಾಸನಾತ್ಮಕ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕೆಂದು ದೆಹಲಿ ಗಡಿಭಾಗದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ.

ಆದರೆ ಕೇಂದ್ರ ಸರ್ಕಾರ ರೈತರ ಹೋರಾಟದ ಬಗ್ಗೆ ನಿರ್ಲಕ್ಷ್ಯ ವಹಿಸಿದಂತೆ ಕಂಡುಬರುತ್ತಿದೆ. ಇದಕ್ಕಾಗಿ ರಾಜಭವನಕ್ಕೆ ಪ್ರತಿಭಟನೆ ಸಾಗಿ ಒತ್ತಾಯ ಪತ್ರವನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ನೀಡುತ್ತಿದ್ದೇವೆ. ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ರೈತರ ಪರವಾಗಿ ಮಸೂದೆ ತರುವಂತೆ ಒತ್ತಾಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ದೇಶದ ಎಲ್ಲ ಭಾಗಗಳಲ್ಲಿ ಚಳವಳಿ ನಡೆಯುವಂತೆ ರಾಜ್ಯದಲ್ಲಿಯೂ ನಡೆಯುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com