ಆಮ್ಲಜನಕ ಕೊರತೆ ಕುರಿತು ಬೆಂಗಳೂರಿನಿಂದ ಎಸ್ಒಎಸ್; ಕೆಲವೇ ಗಂಟೆಗಳಲ್ಲಿ ಸ್ಪಂದಿಸಿ 22 ರೋಗಿಗಳ ಜೀವ ಉಳಿಸಿದ ಸೋನು ಸೂದ್ ಟ್ರಸ್ಟ್!

ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಆಮ್ಲಜನಕವಿಲ್ಲದೇ ಪ್ರಾಣಾಪಾಯಕ್ಕೆ ಸಿಲುಕಿದ್ದ ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡುವ ಮೂಲಕ ಬಾಲಿವುಡ್ ನಟ ಸೋನುಸೂದ್ ಅವರ ಚಾರಿಟಬಲ್ ಟ್ರಸ್ಟ್ 22 ರೋಗಿಗಳ ಜೀವ ಉಳಿಸಿದೆ.
ನಟ ಸೋನು ಸೂದ್
ನಟ ಸೋನು ಸೂದ್

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಆಮ್ಲಜನಕವಿಲ್ಲದೇ ಪ್ರಾಣಾಪಾಯಕ್ಕೆ ಸಿಲುಕಿದ್ದ ರೋಗಿಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡುವ ಮೂಲಕ ಬಾಲಿವುಡ್ ನಟ ಸೋನುಸೂದ್ ಅವರ ಚಾರಿಟಬಲ್ ಟ್ರಸ್ಟ್ 22 ರೋಗಿಗಳ ಜೀವ ಉಳಿಸಿದೆ.

ಹೌದು...ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದ 20ಕ್ಕೂ ಹೆಚ್ಚು ಸೋಂಕಿತರಿಗೆ ಸಕಾಲಕ್ಕೆ ಆಕ್ಸಿಜನ್ ಒದಗಿಸುವಲ್ಲಿ ಬಾಲಿವುಡ್ ನಟ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಯಶಸ್ವಿಯಾಗಿದೆ. ನಗರದ ಯಲಹಂಕ ಬಳಿಯ ಅರ್ಕ ಖಾಸಗಿ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ  ಪಡೆಯುತ್ತಿದ್ದರು. ಆದರೆ, ಸೋಮವಾರ ತಡರಾತ್ರಿ ರೋಗಿಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ ಎದುರಾಗಿದೆ. ಬಳಿಕ ಆಕ್ಸಿಜನ್ ಖಾಲಿ ಆಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಕೂಡಲೇ ಯಲಹಂಕ ಉಪನಗರ ಪೊಲೀಸರಿಗೆ ಕರೆ ಮಾಡಿದ್ದಾರೆ.

ಈ ವೇಳೆ ಅರ್ಕ ಆಸ್ಪತ್ರೆ ಬಳಿ ಬಂದ ಇನ್‍ಸ್ಪೆಕ್ಟರ್ ಸತ್ಯನಾರಾಯಣ್, ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿದ್ದಾರೆ. ಇನ್‍ಸ್ಪೆಕ್ಟರ್ ಮನವಿಗೆ ಕೂಡಲೇ ಸ್ಪಂದಿಸಿರುವ ಸೋನುಸೂದ್ ಟ್ರಸ್ಟ್ ಸಿಬ್ಬಂದಿ, 11 ಆಕ್ಸಿಜನ್ ಸಿಲಿಂಡರ್ ಗಳನ್ನು ಬೈಕ್ ಹಾಗೂ ಕಾರುಗಳಲ್ಲಿ ತಂದಿದ್ದಾರೆ. ಸಮಯಕ್ಕೆ  ಸರಿಯಾಗಿ ಆಕ್ಸಿಜನ್ ತಂದಿದ್ದರಿಂದ ಕೂಡಲೇ 20ಕ್ಕೂ ಹೆಚ್ಚು ಸೋಂಕಿತರಿಗೆ ಆಕ್ಸಿಜನ್ ನೀಡಲಾಗಿದೆ. ಆಕ್ಸಿಜನ್ ಸಿಲಿಂಡರ್ ತರುವುದು ಇನ್ನೊಂದು ತಾಸು ತಡವಾಗಿದ್ದರೂ ಐಸಿಯುನಲ್ಲಿದ್ದ ಕೋವಿಡ್ ಸೋಂಕಿತರು ಮೃತಪಡುವ ಸಾಧ್ಯತೆಯಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಏನಿದು ಘಟನೆ?
ಯಲಹಂಕ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಪಿ. ಸತ್ಯನಾರಾಯಣ ಅವರು ಯಲಹಂಕ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆ.ಪಿ. ಸತ್ಯನಾರಾಯಣ ಅವರಿಗೆ ಒಂದು ಮೊಬೈಲ್ ಕರೆ ಬಂದಿತ್ತು. ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ  ಅರ್ಕಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿದೆ. ಒಬ್ಬ ಕೊರೊನಾ ಸೋಂಕಿತ ರೋಗಿ ಸಾವನ್ನಪ್ಪಿದ್ದಾನೆ. ಉಳಿದ 20ಕ್ಕೂ ಹೆಚ್ಚು ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಈ ವೇಳೆ ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸ್ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಅವರು,  ತನ್ನ ಸಂಪರ್ಕ ಸಂಖ್ಯೆ ಬಳಿಸಿ ಹಲವಾರು ಆಸ್ಪತ್ರೆಗಳನ್ನು ಅಲೆದಾಡಿದ್ದಾರೆ. ಎಲ್ಲೂ ಒಂದೇ ಒಂದು ಸಿಲಿಂಡರ್ ಆಕ್ಸಿಜನ್ ಸಿಕ್ಕಿಲ್ಲ. ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತೆರೆದಿರುವ ಎಮೆರ್ಜೆನ್ಸಿ ಕೋವಿಡ್ ರೆಸ್ಪಾನ್ಸ್ ಕಂಟ್ರೋಲ್ ರೂಮ್‌ನ ನೆರವಿನಿಂದ ಬಾಲಿವುಡ್ ನಟ ಸೋನು ಸೂದ್  ಅವರ ಟ್ರಸ್ಟ್‌ನ್ನು ಸಂಪರ್ಕಿಸಿದ್ದಾರೆ. 

ಆ ಕರೆ ಸ್ವೀಕರಿಸುತ್ತಿದ್ದಂತೆಯೇ ಕೆಲವೇ ಗಂಟೆಗಳ ಅಂತರದಲ್ಲಿ ಸೂನುಸೂದ್ ಟ್ರಸ್ಟ್ ಸಿಬ್ಬಂದಿ ಕಾರು ಮತ್ತು ಬೈಕ್ ಗಳಲ್ಲಿ ಹದಿನೈದು ಆಕ್ಸಿಜನ್ ಸಿಲಿಂಡರ್ ಗಳನ್ನು ಹೊತ್ತು ತಂದು ಮೂರು ತಾಸಿನೊಳಗೆ ಹದಿನೈದು ಸಿಲಿಂಡರ್ ಅರ್ಕಾ ಆಸ್ಪತ್ರೆಗೆ ಒದಗಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಅದನ್ನು ಕನೆಕ್ಟ್ ಮಾಡಿದ್ದು, ಹಾಸಿಗೆಗಳ ಮೇಲೆ ಅದಾಗಲೇ ಒದ್ದಾಟ ಆರಂಭಿಸಿದ್ದ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಸಿದ್ದಾರೆ. ಈ ಮೂಲಕ ಹಲವು ಜೀವಗಳಿಗೆ ಉಸಿರು ನೀಡುವ ಮೂಲಕ ಪೊಲೀಸ್ ಇಲಾಖೆ ಮತ್ತು ಸೋನುಸೂದ್ ಟ್ರಸ್ಟ್ ಸಿಬ್ಬಂದಿ ಪ್ರಶಂಸೆಗೆ ಕಾರಣರಾಗಿದ್ದಾರೆ. ಇನ್ ಸ್ಪೆಕ್ಟರ್ ಸತ್ಯನಾರಾಯಣ್ ಮಧ್ಯ ರಾತ್ರಿಯಲ್ಲಿ  ಮಾನವೀಯ ಸೇವೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈ ಹಿಂದೆ ಆಕ್ಸಿಜನ್ ಇಲ್ಲದೇ ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 24 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಇಡೀ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಮಧ್ಯರಾತ್ರಿಯಲ್ಲಿ ಆಕ್ಸಿಜನ್  ಪೂರೈಸುವ ಮೂಲಕ ಪೊಲೀಸ್ ಸಮವಸ್ತ್ರಕ್ಕೆ ಹೊಸ ಗೌರವ ತಂದು ಕೊಟ್ಟಿದ್ದಾರೆ.

ಜೀವ ಮುಖ್ಯ; ಪೊಲೀಸರ ಕ್ರಮಕ್ಕೆ ಸಲಾಂ ಹೇಳಿದ ಸೋನುಸೂದ್
ಇನ್ನು ತಮ್ಮ ಟ್ರಸ್ಟ್ ನ ಸಿಬ್ಬಂದಿ ಮತ್ತು ಪೊಲೀಸರ ಕಾರ್ಯವನ್ನು ನಟ ಸೋನುಸೂದ್ ಮುಕ್ತಕಂಠದಿಂದ ಶ್ಲಾಘಿಸಿದ್ದು, 'ಇದು ಸಂಪೂರ್ಣ ತಂಡದ ಕೆಲಸ. ನಮ್ಮ ಸಹವರ್ತಿಗಳಿಗೆ ಸಹಾಯ ಮಾಡುವ ಇಚ್ಛಾಶಕ್ತಿಯಿಂದಾಗಿ ಜೀವಗಳನ್ನು ಉಳಿಸಲು ಸಾಧ್ಯವಾಗಿದೆ. ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಅವರಿಂದ ನಮಗೆ  ಕರೆ ಬಂದ ಕೂಡಲೇ ನಾವು ಅದನ್ನು ಪರಿಶೀಲಿಸಿದ್ದೇವೆ ಮತ್ತು ಕೆಲವೇ ನಿಮಿಷಗಳಲ್ಲಿ ಕ್ರಮ ಕೈಗೊಂಡಿದ್ದೇವೆ. ತಂಡವು ಇಡೀ ರಾತ್ರಿ ಯಾವುದರ ಬಗ್ಗೆಯೂ ಯೋಚಿಸದೆ ಆಮ್ಲಜನಕ ಸಿಲಿಂಡರ್‌ಗಳನ್ನು ಪಡೆಯಲು ಹರಸಾಹಸ ಪಟ್ಟು ಆಸ್ಪತ್ರೆಗೆ ಸಹಾಯ ಮಾಡಿದೆ. . ಸಿಲಿಂಡರ್ ಗಳನ್ನು ತಲುಪಿಸುವುದರಲ್ಲಿ  ಯಾವುದೇ ರೀತಿಯ ವಿಳಂಬವಾಗಿದ್ದರೂ, ಅನೇಕ ಕುಟುಂಬಗಳು ತಮ್ಮ ನಿಕಟ ವ್ಯಕ್ತಿಗಳನ್ನು ಕಳೆದುಕೊಳ್ಳಬಹುದಿತ್ತು. 

ಕಳೆದ ರಾತ್ರಿ ಅನೇಕ ಜೀವಗಳನ್ನು ಉಳಿಸುವಲ್ಲಿ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ತಂಡದ ಸದಸ್ಯರ ಇಂತಹ ಕ್ರಮಗಳು ಮುಂದುವರಿಯಲು ಮತ್ತು ಜನರ ಜೀವನದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತೇವೆ ಎಂದು ಸೋನು ಸೂದ್ ಹೇಳಿದ್ದಾರೆ.

ಸದ್ದಿಲ್ಲದೇ ಬೆಂಗಳೂರು ಪೊಲೀಸರ ನೆರವಿಗೆ ನಿಂತ ಸೋನುಸೂದ್
ಇತ್ತ ಕೋವಿಡ್​ ಸೋಂಕಿನ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಕಾರ್ಯಕರ್ತರಾಗಿರುವ ಪೊಲೀಸರ ರಕ್ಷಣೆಗೂ ಮುಂದಾಗಿರುವ ನಟ ಸೋನುಸೂದ್ ಮತ್ತು ಅವರ ಚಾರಿಟಬಲ್ ಟ್ರಸ್ಟ್ ಅವರ ನೆರವಿಗೆ ನಿಂತಿದ್ದಾರೆ. ಪ್ರಮುಖವಾಗಿ ಬೆಂಗಳೂರು ಪೊಲೀಸರಿಗೆ ಸುಮಾರು 80 ಸಾವಿರ ಬೆಲೆಬಾಳುವ ಆಕ್ಸಿಜನ್​  ಕಾನ್ಸನ್ಟ್ರೇಟರ್ ಯಂತ್ರಗಳನ್ನು ನೀಡಿ ಅವರ ಕರ್ತವ್ಯಕ್ಕೆ ಬೆಂಬಲ ಸೂಚಿಸಿದ್ದಾರೆ. ಸೋನು ಸೂದ್​ ಪೌಂಡೇಶನ್​ ಚಾರಿಟಬಲ್​ ಟ್ರಸ್ಟ್​ ಮೂಲಕ ಪೊಲೀಸರಿಗೆ ಆಕ್ಸಿಜನ್ ಯಂತ್ರ ನೀಡಲಾಗಿದ್ದು, ಸೋನು ಸೂದ್ ಚಾರಿಟಬಲ್ ಟ್ರಸ್ಟ್ ನ ಹಶ್ಮತ್ ಎಂಬುವವರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಈ ಆಕ್ಸಿಜನ್​  ಕಾನ್ಸನ್ಟ್ರೇಟರ್ ಯಂತ್ರವನ್ನು ಹಸ್ತಾಂತರ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com