ಕೋವಿಡ್-19 ಬೆಡ್ ಬ್ಲಾಕಿಂಗ್ ಪ್ರಕರಣ: ಮತ್ತಿಬ್ಬರು ಸಿಸಿಬಿ ವಶಕ್ಕೆ
ಕೋವಿಡ್ ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನ ಬಂಧನವಾದ ಬೆನ್ನಲ್ಲೇ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Published: 27th May 2021 04:52 PM | Last Updated: 27th May 2021 04:52 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೋವಿಡ್ ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನ ಬಂಧನವಾದ ಬೆನ್ನಲ್ಲೇ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವರುಣ್ ಹಾಗೂ ಯಶವಂತ ಕುಮಾರ್ ಬಂಧಿತ ಆರೋಪಿಗಳು. ಸುದ್ದಿಗಾರರೊಂದಿಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 10 ಜನರನ್ನು ಬಂಧಿಸಲಾಗಿದ್ದು, ನಿನ್ನೆ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ ಎಂದರು.
ವಾರ್ ರೂಮ್ನಲ್ಲಿ ಕೆಲಸ ಮಾಡುತ್ತಿದ್ದ ವರುಣ್ ಹಾಗೂ ಆತನ ಸ್ನೇಹಿತ ಯಶವಂತ್ನನ್ನು ಬಂಧಿಸಲಾಗಿದೆ. ಆರೋಪಿ ವರುಣ್, ಬಿಬಿಎಂಪಿ ದಕ್ಷಿಣ ವಲಯ ಕೊವಿಡ್ ವಾರ್ ರೂಂ ಹೆಲ್ಪ್ ಲೈನ್ನಲ್ಲಿ ಕೆಲಸ ಮಾಡುತ್ತಿದ್ದ. ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ನಗರದ ಆಸ್ಪತ್ರೆಗಳಲ್ಲಿ ಬೆಡ್ ಅಭಾವ ಸೃಷ್ಟಿಯಾಗತೊಡಗಿತ್ತು. ಈ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ವರುಣ್, ಬೆಡ್ ಅಗತ್ಯವಿದ್ದವರ ಮೊಬೈಲ್ ನಂಬರ್ ಸಂಗ್ರಹಿಸಿ ತನ್ನ ಸ್ನೇಹಿತ ಯಶವಂತ ಕುಮಾರ್ ಮೂಲಕ ಕರೆ ಮಾಡಿಸುತ್ತಿದ್ದ ಎಂದರು.
ಐಸಿಯುನಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯವಿರುವ ಬೆಡ್ ಕೊಡಿಸುವುದಾಗಿ ಭರವಸೆ ನೀಡಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ. ಬಳಿಕ ಬ್ಯಾಂಕ್ ಅಕೌಂಟ್ ನಂಬರ್ ನೀಡಿ ರೋಗಿಯ ಕುಟುಂಬಸ್ಥರಿಂದ ಹಣ ಹಾಕಿಸಿಕೊಳ್ಳುತ್ತಿದ್ದ. ಹಣ ಪಡೆದು ಸರ್ಕಾರಿ ಕೋಟಾದಡಿ ಬೆಡ್ ಬ್ಲಾಕ್ ಮಾಡಿಸುತ್ತಿದ್ದ ಎಂದು ತಿಳಿಸಿದರು.
ಈವರೆಗೆ ಎಷ್ಟು ಜನರಿಂದ ಆರೋಪಿಗಳು ಹಣ ಪಡೆದುಕೊಂಡಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು.