ನಟ ಪುನೀತ್ ಸಾವು ಬಳಿಕ ಹಾರ್ಟ್ ಚೆಕಪ್'ಗೆ ಆಸ್ಪತ್ರೆಗಳಿಗೆ ಮುಗಿಬಿದ್ದ ಜನ!

ನಟ ಪುನೀತ್ತ ರಾಜ್ ಕುಮಾರ್ ಹೃದಯ ಸ್ತಂಭನದಿಂದ ಮೃತಪಟ್ಟ ಬೆನ್ನಲ್ಲೇ ಜನರದಲ್ಲಿ ಇದೀಗ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದ್ದು, ರಾಜ್ಯದಾದ್ಯಂತ ಹೃದಯ ಪರೀಕ್ಷೆಗಾಗಿ ಜನರು ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ.
ನಟ ಪುನೀತ್ ರಾಜ್ ಕುಮಾರ್
ನಟ ಪುನೀತ್ ರಾಜ್ ಕುಮಾರ್

ಬೆಂಗಳೂರು: ನಟ ಪುನೀತ್ತ ರಾಜ್ ಕುಮಾರ್ ಹೃದಯ ಸ್ತಂಭನದಿಂದ ಮೃತಪಟ್ಟ ಬೆನ್ನಲ್ಲೇ ಜನರದಲ್ಲಿ ಇದೀಗ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದ್ದು, ರಾಜ್ಯದಾದ್ಯಂತ ಹೃದಯ ಪರೀಕ್ಷೆಗಾಗಿ ಜನರು ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ.

ಬೆಂಗಳೂರು, ಮಂಡ್ಯ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಯುವಕರು, ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಹೃದಯದ ಪರೀಕ್ಷೆಗೆ ಮುಂದಾಗಿದ್ದಾರೆ. ಪ್ರಮುಖವಾಗಿ ಜಿಮ್ ಗಳಲ್ಲಿ ಕಸರತ್ತು ನಡೆಸಿ ಬೆವರು ಹರಿಸುವವರು ಆತಂಕಕ್ಕೊಳಗಾಗಿದ್ದು, ಹೃದಯ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿತ್ಯ ಸರಾಸರಿ 1,200 ಮಂದಿ ಓಪಿಡಿಯಲ್ಲಿ ಪರೀಕ್ಷೆಗೆ ಆಗಮಿಸುತ್ತಿದ್ದಾರೆ. ಭಾನುವಾರದ ರಜೆ ದಿನ ತುರ್ತು ಚಿಕಿತ್ಸೆ ಮಾತ್ರ ಇದ್ದು, ಓಪಿಡಿ ಸೇವೆ ಇರುವುದಿಲ್ಲ. ಹೀಗಿದ್ದರೂ ಕೂಡ ಭಾನುವಾರ ಜಯದೇವ ಆಸ್ಪತ್ರೆಗೆ 550 ಮಂದಿ ಹಾಗೂ ಸೋಮವಾರ ಮಧ್ಯಾಹ್ನ 1 ಗಂಟೆಗೆ 1,500 ಮಂದಿ ಆಗಮಿಸಿದ್ದಾರಂದು ತಿಳಿದುಬಂದಿದೆ. ಇನ್ನು ಮೈಸೂರಿನ ಆಸ್ಪತ್ರೆಗೆ ನಿನ್ನೆ 1,000 ರೋಗಿಗಳು ಬದಿದ್ದಾರೆಂದು ತಿಳಿದುಬಂದಿದೆ.

ಪ್ರತೀನಿತ್ಯ 75 ತುರ್ತುಪರಿಸ್ಥಿತಿ ಪ್ರಕರಣಗಳು ಬರುತ್ತಿದ್ದವು. ಆದರೆ, ಭಾನುವಾರ 550 ಪ್ರಕರಣಗಳು ದಾಖಲಾಗಿವೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿಎನ್.ಮಂಜುನಾಥ್ ಅವರು ಹೇಳಿದ್ದಾರೆ. ಕೇವಲ ಯುವಕರಷ್ಟೇ ಅಲ್ಲ, ವಯೋವೃದ್ಧರೂ ಕೂಡ ಪರೀಕ್ಷೆಗೆ ಬರುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.

ಪ್ರತೀನಿತ್ಯ ದಾಖಲಾಗುತ್ತಿದ್ದ ಪ್ರಕರಣಗಳಿಗಿಂತಲೂ ಮೂರುಪಟ್ಟು ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಎದೆನೋವು ಎಂದು ಹೇಳಿಕೊಂಡು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಈ ವೇಳೆ ಅವರಿಗೆ ಇಸಿಜಿ, ಎಕೋಕಾರ್ಡಿಯೋಗ್ರಾಮ್, ಟಿಎಂಟಿ ಪರೀಕ್ಷೆಗಳು ಮತ್ತು ಟ್ರೋಪೋನಿನ್‌ನಂತಹ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಕೆಲವರು ಪರಿಧಮನಿಯ ಸಿಟಿ ಆಂಜಿಯೋಗ್ರಫಿ ಬಗ್ಗೆ ವಿಚಾರಿಸುತ್ತಿದ್ದಾರೆಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಹಿರಿಯ ಸಲಹೆಗಾರ ಡಾ ಪ್ರದೀಪ್ ಕುಮಾರ್ ಡಿ ಅವರು ಹೇಳಿದ್ದಾರೆ.

ಕೆಲ ರೋಗಿಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳೇ ಇಲ್ಲದಿದ್ದರೂ, ಪರೀಕ್ಷೆಗಾಗಿ ಬರುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸಾವಿನ ಬಳಿಕ ಸುದೀರ್ಘವಾಗಿ ಟಿವಿಯನ್ನು ನೋಡಿದ ಪರಿಣಾಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಹಾಗೂ ಸಂದೇಶಗಳನ್ನು ನೋಡಿ ಆತಂಕಕ್ಕೊಳಗಾಗಿದ್ದಾರೆಂದು ಡಾ.ಮಂಜುನಾಥ್ ಅವರು ಹೇಳಿದ್ದಾರೆ.

ಚಿರಂಜೀವಿ ಸರ್ಜಾ ಹಾಗೂ ಸಿದ್ಧಾರ್ಥ್ ಶುಕ್ಲಾ ಸಾವು ಬಳಿಕವು ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಹೃದಯ ಸಂಬಂಧಿ ಸಮಸ್ಯೆ ಹೇಳಿಕೊಂಡು ಸಾಕಷ್ಟು ಜನರು ಬರುತ್ತಿದ್ದು, ಇದೀಗ ನಮ್ಮ ಆಸ್ಪತ್ರೆಯ ತುರ್ತುನಿಗಾ ಘಟಕವು ರೋಗಿಗಳಿಂದ ತುಂಬಿ ಹೋಗಿದೆ ಎಂದು ಅಪೋಲೋ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ.ಅಭಿಜಿತ್ ಕುಲಕರ್ಣಿಯವರು ಹೇಳಿದ್ದಾರೆ.

ಫೋರ್ಟಿಸ್ ಆಸ್ಪತ್ರೆಗಳ ನಿರ್ದೇಶಕ ಮತ್ತು ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ ರಾಜ್‌ಪಾಲ್ ಸಿಂಗ್ ಅವರು ಮಾತನಾಡಿ, ಘೋಷಿತ ಸಾರ್ವಜನಿಕ ರಜಾದಿನವಾಗಿದ್ದರೂ, ಸೋಮವಾರ ಸಂಪೂರ್ಣ ದಿನ ಹೊರ ರೋಗಿಗಳ ವಿಭಾಗದಲ್ಲಿ ಬಿಝಿಯಾಗಿದ್ದೆ. ಸಾಕಷ್ಟು ಯುವಕರು ಹೃದಯ ಸಂಬಂಧಿ ಸಮಸ್ಯೆ ಹೇಳಿಕೊಂಡು ಆಸ್ಪತ್ರಗೆ ಬಂದಿದ್ದರು ಎಂದು ತಿಳಿಸಿದ್ದಾರೆ.

ಆತಂಕಗಳು ಸಮಸ್ಯೆಗಳನ್ನು ಉಲ್ಬಣಿಸುತ್ತವೆ. ಜನರು ವರ್ಷಕ್ಕೊಮ್ಮೆಯಾದರೂ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಹೃದಯವು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಬೇಕು. ತೂಕವನ್ನು ಸರಿಯಾದ ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು. ಧೂಮಪಾನ, ಮದ್ಯಪಾನಗಳನ್ನು ಮಾಡಬಾರದು, ಪ್ರತೀನಿತ್ಯ ವ್ಯಾಯಾಮ ಮಾಡಬೇಕು ಎಂದು ಇತರೆ ವೈದ್ಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com