"ರೈತರ ಹಬ್ಬ" ಆರಂಭ; ನಾಲ್ಕು ದಿನ "ಬೆಂಗಳೂರು ಕೃಷಿ ಮೇಳ"

ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕು ದಿನಗಳ ರೈತರ ಹಬ್ಬ ಕೃಷಿ ಮೇಳಕ್ಕೆ ಗುರುವಾರ ಚಾಲನೆ ನೀಡಲಾಗಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ಆವರಣದಲ್ಲಿ ಜಿಟಿಜಿಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕು ದಿನಗಳ ರೈತರ ಹಬ್ಬ ಕೃಷಿ ಮೇಳಕ್ಕೆ ಗುರುವಾರ ಚಾಲನೆ ನೀಡಲಾಗಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ಆವರಣದಲ್ಲಿ ಜಿಟಿಜಿಟಿ ಮಳೆ ಮಧ್ಯೆ ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ತಡವಾಗಿ ಪ್ರಾರಂಭವಾಯಿತು.

ರೈತ ಗೀತೆಯೊಂದಿಗೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಆದಿವಾಸಿ ರೈತ ಮಹಿಳೆ ಪ್ರೇಮ ಅವರಿಂದ 2021ರ ಕೃಷಿ ಮೇಳ ಉದ್ಘಾಟನೆಗೊಂಡಿರುವುದು ಈ ಬಾರಿಯ ವಿಶೇಷ. 

ಕಾರ್ಯಕ್ರಮದಲ್ಲಿ ಇಂಪಾಲ್ ನ ಕೇಂದ್ರ ವಿಶ್ವವಿದ್ಯಾಲಯ ಕುಲಾಧಿಪತಿಗಳು ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್(ICAR)ನ ನಿವೃತ್ತ ನಿರ್ದೇಶಕರೂ ಆಗಿರುವ ಡಾ.ಎಸ್.ಅಯ್ಯಪ್ಪನ್ ಅವರ ಸಮ್ಮುಖದಲ್ಲಿ 4 ದಿನಗಳ ರೈತರ ಹಬ್ಬಕ್ಕೆ ಹಸಿರು ನಿಶಾನೆ ದೊರೆಯಿತು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ರಾಜೇಂದ್ರ ಪ್ರಸಾದ್, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್, ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರು ಸೇರಿದಂತೆ ಅನೇಕ ಅಧಿಕಾರಿಗಳು, ನವೆಂಬರ್ 14ರವರೆಗೆ ನಡೆಯುವ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರೈತರ ಆದಾಯ ಹೆಚ್ಚಿಸಬೇಕೆಂಬ ಕೇಂದ್ರ ಸರ್ಕಾರದ ನಿಲುವಿನಂತೆ ಬೆಂಗಳೂರು ಕೃಷಿ ವಿವಿ "ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಕೃಷಿ ತಾಂತ್ರಿಕತೆಗಳು" ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿಯ ಕೃಷಿ ಮೇಳವನ್ನು ಆಯೋಜನೆ ಮಾಡಿದೆ.

ಕೃಷಿ ಮೇಳದಲ್ಲಿ ಬೆಂಗಳೂರು ಕೃಷಿ ವಿವಿ ಹಲವು ವಿಶಿಷ್ಠ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಮುಖವಾಗಿ ರೈತ ಮೇಳದಲ್ಲಿ 10 ಹೊಸ ತಳಿಗಳು ಮತ್ತು 28 ನೂತನ ತಂತ್ರಜ್ಞಾನಗಳನ್ನು ಇಂದು ಬಿಡುಗಡೆ ಮಾಡಲಾಯಿತು. ಕೃಷಿ ಸಾಧಕರಿಗೆ ಪುರಸ್ಕಾರ, ಅಂಗೈಯಲ್ಲೇ ಕೃಷಿ ಮೇಳ, ಕುಳಿತಲ್ಲೇ ಕೃಷಿಕರ ಕೃಷಿ ಸಮಸ್ಯೆಗಳಿಗೆ ಪರಿಹಾರ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಸೇರಿದಂತೆ ಕೃಷಿಗೆ ಉಪಯೋಗವಾಗುವ ಮಾಹಿತಿ ಕಣಜವನ್ನು ಬೆಂಗಳೂರು ಕೃಷಿ ವಿವಿ ಅನಾವರಣಗೊಳಿಸಲಾಗಿದೆ.

ದೂರದರ್ಶನ ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ರೈತರಿಗೆ ಕೃಷಿ ಮೇಳದ ದರ್ಶನ ಭಾಗ್ಯ ಈ ಬಾರಿ ದೊರೆಯುತ್ತಿದೆ. ವೆಬ್‍ಪೇಜ್, ವೆಬ್‍ಸೈಟ್, ಯೂಟ್ಯೂಬ್, ಫೇಸ್‍ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮತ್ತು ಜೂಮ್ ಸಭೆಗಳ ಮೂಲಕ ರೈತರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೃಷಿ ಮೇಳದ ಲಾಭಗಳು ನೇರ ಪ್ರಸಾರದ ಮೂಲಕ ದೊರೆಯುತ್ತಿವೆ.

ಪ್ರತಿ ಸಲದಂತೆ ಈ ಬಾರಿಯೂ ಕೃಷಿಯಲ್ಲಿ ಅದ್ವಿತೀಯ ಸಾಧನೆ ಮಾಡಿದ ರೈತರು, ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರಿಗೆ ಬೆಂಗಳೂರು ಕೃಷಿ ವಿವಿ ಸನ್ಮಾನ ಮಾಡಿತು. ಕೃಷಿಮೇಳಕ್ಕೆ ಆಗಮಿಸುವ ರೈತರಿಗೆ ಜಿಕೆವಿಕೆಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ಉಚಿತ ಸಾರಿಗೆ, ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ಕೋವಿಡ್ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾವಿರಾರು ಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸಲು ಕೃಷಿಯಲ್ಲಿ ತಾಂತ್ರಿಕತೆಗಳ ಬಳಕೆ ಅತಿಮುಖ್ಯ. ಹೀಗಾಗಿ, 10 ಹೊಸ ತಳಿಗಳು ಮತ್ತು 28 ನೂತನ ತಂತ್ರಜ್ಞಾನಗಳನ್ನು ಇಂದು ಬಿಡುಗಡೆ ಮಾಡಲಾಯಿತು ಅಂತಾ ಅವರು ತಿಳಿಸಿದರು.

ಕೋವಿಡ್ ಕಾರಣದಿಂದಾಗಿ ಕೇವಲ 250 ಸ್ಟಾಲ್ ಗಳನ್ನು ತೆರೆಯಬೇಕೆಂದು ತೀರ್ಮಾನ ಮಾಡಲಾಗಿತ್ತು. ಆದರೆ, ಇನ್ವೆಸ್ಟರ್ಸ್, ಡೀಲರ್ಸ್ ಗಳ ಒತ್ತಾಯದಿಂದಾಗಿ 550ಕ್ಕೂ ಅಧಿಕ ಸ್ಟಾಲ್ ಗಳನ್ನು ತೆರೆದಿದ್ದೇವೆ. ಕೋಳಿ ಸಾಕಾಣಿಕೆ, ಪಶುಸಂಗೋಪನೆ, ಕೃಷಿ ಯಂತ್ರಗಳು, ಹನಿ ನೀರಾವರಿಯ ಪ್ರಾತ್ಯಕ್ಷಿಕೆಗಳು ಈ ಮೇಳದಲ್ಲಿ ಅನ್ನದಾತರಿಗೆ ಲಾಭ ದೊರಕಿಸಿಕೊಡಲಿವೆ ಅಂತಾ ಕುಲಪತಿಗಳು ತಿಳಿಸಿದರು. ಕೃಷಿ ಮೇಳ ಆರಂಭವಾದ 2 ಗಂಟೆಗಳಲ್ಲಿ ಅಧಿಕೃತವಾಗಿ 12 ಸಾವಿರ ಜನರು ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲದೆ ಮುಂದಿನ 3 ದಿನಗಳಲ್ಲಿ ಕಳೆದ ಬಾರಿಗಿಂತ ಅಧಿಕ ರೈತರು ಭೇಟಿ ಕೊಟ್ಟು ಕೃಷಿ ಮೇಳಕ್ಕೆ ಮೆರಗು ತರಲಿದ್ದಾರೆ ಅಂತಾ ಡಾ.ರಾಜೇಂದ್ರ ಪ್ರಸಾದ ಸುದ್ದಿಗಾರರಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com