ಬಾಕಿ ಉಳಿದಿರುವ ರೈಲ್ವೇ ಯೋಜನೆಗಳ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಸರ್ಕಾರ ನಿರ್ಧಾರ!

ರಾಜ್ಯದಲ್ಲಿ ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ರಾಜ್ಯದ 8 ರೈಲ್ವೇ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ.
ಸಚಿವ ಸೋಮಣ್ಣ
ಸಚಿವ ಸೋಮಣ್ಣ

ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ರಾಜ್ಯದ 8 ರೈಲ್ವೇ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಬುಧವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿರುವ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು, ರಾಜ್ಯದ ಹಲವು ವರ್ಷಗಳಿಂದ 8 ರೈಲ್ವೇ ಯೋಜನೆಗಳ ಅನುಷ್ಠಾನ ಆಮೆಗತಿಯಲ್ಲಿ ಸಾಗುತ್ತಿದ್ದು, ಪರಿಣಾಮ ಯೋಜನೆಗಳ ಅಂದಾಜು ವೆಚ್ಚ ಎರಡು-ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಮುಂದಿನ 20 ದಿನದಲ್ಲಿ ಭೂಸ್ವಾಧೀನ ಸೇರಿದಂತೆ ಅಗತ್ಯ ಅಡೆತಡೆ ನಿವಾರಿಸಿ ಸುಗಮವಾಗಿ ಕಾಮಗಾರಿ ನಡೆಯುವಂತೆ ಅನುವು ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 56 ರೈಲ್ವೇ ಮೇಲು ಸೇತುವೆ ಹಾಗೂ ಕೆಳ ಸೇತುವೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲೇ ಪೂರ್ಣಗೊಳಿಸುುದಾಗಿ ಭರವಸೆ ನೀಡಿದ್ದಾರೆ.

2007ರಿಂದ ಗಿಣಿಗೇರಾ-ರಾಯಚೂರು ರೈಲ್ವೇ ಮಾರ್ಗದ ಯೋಜನೆ ಬಾಕಿ ಉಳಿದಿದೆ. ಹಲವು ವರ್ಷಗಳಿಂದ ಒಟ್ಟು 8 ರೈಲ್ವೇ ಯೋಜನೆಗಳ ಅನುಷ್ಠಾನ ನೆನೆಗುದಿಗೆ ಬಿದ್ದಿದೆ. ಹೀಗಾಗಿ ರೈಲ್ವೇ ಇಲಾಖೆ ಅದಿಕಾರಿಗಳು, ಕೆ-ರೈಡ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತ್ವರಿತವಾಗಿ ಯೋಜನೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಯೋಜನೆಯ ಅನುಷ್ಠಾನ ವಿಳಂಬದಿಂದ ಕೆಲ ಯೋಜನಾ ವೆಚ್ಚದುಪ್ಪಟ್ಟಾಗಿದೆ. ಜೊತೆಗೆ ಇತರೆ ಅಡೆತಡೆಗಳು ಎದುರಾಗಿವೆ. ಹೀಗಾಗಿ 15-20 ದಿನಗಳಲ್ಲಿ ಅಡೆತಡೆ ನಿವಾರಿಸಲು ಪ್ರಯತ್ನಿಸಲಾಗುವುದು. ಜೊತೆಗೆ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ 56 ರೈಲ್ವೇ ಮೇಲುಸೇತುವೆ ಹಾಗೂ ಕೆಳ ಸೇವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಯೋಜನೆ ವಿಳಂಬ ಎಲ್ಲರಿಗೂ ಬೇಸರ ಮೂಡಿಸಿದೆ. ಜತೆಗೆ ಯೋಜನಾ ವೆಚ್ಚವೂ ಹೆಚ್ಚಾಗುತ್ತಿದೆ. ಹೀಗಾಗಿ ಮಾರ್ಚ್ ಒಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉಳಿದಂತೆ ಶಿವಮೊಗ್ಗ, ವಿಜಯಪುರ ಸೇರಿದಂತೆ ಇತರೆಡೆ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕಾರವಾರದಲ್ಲಿ ಸೀಬರ್ಡ್ ಎನ್ ಕ್ಲೇವ್ ನಿರ್ಮಾಣ ಕಾರ್ಯವನ್ನು ಶೀಘ್ರವೇ ಆರಂಭಿಸಲಾಗುವುದು. ಜೊತೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಸಿಎಂ ಬೊಮ್ಮಾಯಿಯವರನ್ನು ಕೊಂಡಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಕಚಕ್ಯತೆಯಿಂದ ಆಡಳಿತ ನಡೆಸುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ಬಳಿಕ ಬಿಟ್‌ಕಾಯಿನ್‌ ವಿಚಾರವಾಗಿ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಕಾಂಗ್ರೆಸ್‌ ನಾಯಕರಿಗೆ ದೃಢೀಕೃತ ಮಾಹಿತಿ ಇದ್ದರೆ ಮಾತ್ರ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com