ನವೆಂಬರ್ 29 ರಿಂದ ಕಡಲೆಕಾಯಿ ಪರಿಷೆ: ವ್ಯಾಪಾರಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ!
ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಡಲೇಕಾಯಿ ಪರಿಷೆಗೆ ಬ್ರೇಕ್ ಹಾಕಲಾಗಿತ್ತು. ಈ ಬಾರಿ ಕೊರೋನಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 29 ರಿಂದ ಪರಿಷೆ ಆರಂಭವಾಗಲಿದೆ.
Published: 13th November 2021 02:13 PM | Last Updated: 13th November 2021 02:13 PM | A+A A-

ಕಡಲೆಕಾಯಿ ಪರಿಷೆ (ಸಂಗ್ರಹ ಚಿತ್ರ)
ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಡಲೇಕಾಯಿ ಪರಿಷೆಗೆ ಬ್ರೇಕ್ ಹಾಕಲಾಗಿತ್ತು. ಈ ಬಾರಿ ಕೊರೋನಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 29 ರಿಂದ ಪರಿಷೆ ಆರಂಭವಾಗಲಿದೆ.
ಒಂದು ವಾರದ ಕಾಲ ಸಾಂಪ್ರದಾಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಜಾನಪದ ವೈಭವದಿಂದ ಪರಿಷೆ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಇನ್ನೂ ಕಡಲೆಕಾಯಿ ಪರಿಷೆಯಲ್ಲಿ ಅಂಗಡಿ ಹಾಕುವವರು ಕೋವಿಡ್ 19 ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಂಡಿರಬೇಕು ಮತ್ತು ಎರಡು ಲಸಿಕೆಗಳನ್ನುಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ.
ಈ ಸಂಬಂಧ ಮಾತನಾಡಿದ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಬಿಎಂಟಿಸಿ, ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್ ಇಲಾಖೆ, ಬೆಸ್ಕಾಂ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳ ಜೊತೆ ಚರ್ಚಿಸಿ ಕಡ್ಲೆಕಾಯಿ ಪರಿಷೆ ನಡೆಸಲು ತೀರ್ಮಾನಿಸಲಾಯಿತು.
ನವೆಂಬರ್ 29 ಮತ್ತು 30 ರಂದು ಪರಿಷೆ ನಡೆಸಲು ನಿರ್ಧರಿಸಲಾಗಿದೆ, ಆದರೆ ಮೂರು ದಿನ ಮುಂಚಿತವಾಗಿಯೇ ವ್ಯಾಪಾರಿಗಳು ಅಂಗಡಿ ಹಾಕಲು ಪ್ರಾರಂಭಿಸುತ್ತಾರೆ. ಒಂದು ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಗಿದ್ದರೂ, ಸ್ಟಾಲ್‌ಗಳನ್ನು ಹಾಕುವ ಎಲ್ಲರಿಗೂ ಕೋವಿಡ್ ಪರೀಕ್ಷಾ ವರದಿಯನ್ನು ಹೊಂದಲು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ವ್ಯಾಪಾರಿಗಳಿಗೆ ಸ್ಟಾಲ್‌ಗಳನ್ನು ಸ್ಥಾಪಿಸಲು ಗುರುತು ಹಾಕಲಾಗುತ್ತದೆ ಹಾಗೂ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ರಸ್ತೆ ಬದಿಗಳಲ್ಲಿ ಇತರ ಸ್ಥಳಗಳಲ್ಲಿ ಕುಳಿತುಕೊಳ್ಳುವ ಮಾರಾಟ ಮಾಡುವ ಎಲ್ಲರನ್ನು ಸ್ಥಳದಿಂದ ವಾಪಸ್ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ವರ್ಷ, ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ಮತ್ತು ಬ್ಯೂಗಲ್ ರಾಕ್ ಮತ್ತು ನರಸಿಂಹಸ್ವಾಮಿ ಉದ್ಯಾನವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಲಾಗಿದೆ. ಅಧಿಕಾರಿಗಳು ಈ ಸಂಬಂಧ ಕೆಲಸ ಮಾಡುತ್ತಿದ್ದಾರೆ ಎಂದು ರವಿಸುಬ್ರಹ್ಮಣ್ಯ ಹೇಳಿದರು.
ಎರಡು ವರ್ಷಗಳ ನಂತರ ಜಾತ್ರೆ ನಡೆಯುತ್ತಿರುವುದರಿಂದ ಹೆಚ್ಚಿನ ಜನ ಬರುವ ಸಾಧ್ಯತೆಯಿದೆ, ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಪಾಸಣೆಗೆ ಮಾರ್ಷಲ್‌ಗಳನ್ನೂ ನಿಯೋಜಿಸಲಾಗುವುದು. 10 ಲಕ್ಷಕ್ಕೂ ಹೆಚ್ಚು ಜನರು ಪರಿಷೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಹಾಗಾಗಿ ಮೂಲಭೂತ ಸೌಕರ್ಯ, ಭದ್ರತೆಗಾಗಿ ಪೊಲೀಸ್ ಮತ್ತು ಬಿಬಿಎಂಪಿ ಜಂಟಿಯಾಗಿ 700 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದು.