ಬೆಂಗಳೂರು: ಬಿಡಿಎ ಪ್ರಧಾನ ಕಚೇರಿ ಮೇಲೆ ಎಸಿಬಿ ದಾಳಿ, ತೀವ್ರ ಶೋಧ, ನಗದು ಜಪ್ತಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಪ್ರಧಾನ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು, ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
Published: 19th November 2021 07:10 PM | Last Updated: 19th November 2021 08:19 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಪ್ರಧಾನ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು, ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಇಂದು ಮಧ್ಯಾಹ್ನ ಏಕಕಾಲದಲ್ಲಿ ಹಲವು ತಂಡಗಳಲ್ಲಿ ಬಂದ ಎಸಿಬಿ ಅಧಿಕಾರಿಗಳು ಕಚೇರಿಯ ಬೇರೆಬೇರೆ ಹಂತದ ಅಧಿಕಾರಿಗಳ ಕೊಠಡಿಗಳೊಳಗೆ ಪ್ರವೇಶಿಸಿ ತನಿಖೆ ಆರಂಭಿಸಿದರು. ನಂತರ ಬಿಡಿಎ ಡೆಪ್ಯೂಟಿ ಸೆಕ್ರೆಟರಿ ನವೀನ್ ಜೋಸೆಫ್ ಕಚೇರಿ ಮೇಲೆ ದಾಳಿ ನಡೆಸಿ ನಗದು ಹಣ ಜಪ್ತಿಮಾಡಿದರು ಎಂದು ತಿಳಿದು ಬಂದಿದೆ.
ಇದುವರೆಗೂ ಬಿಡಿಎ ಕಚೇರಿಯ 50 ಕೊಠಡಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಬಿಡಿಎ ಕಚೇರಿ ಆವರಣದಲ್ಲಿರುವ ಏಜೆಂಟ್ ಗಳ ಬ್ಯಾಗ್, ಬ್ರೀಫ್ ಕೇಸ್ ಗಳನ್ನು ಕೂಡ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳು ಕಚೇರಿಯ ಇಂಚಿಂಚೂ ಶೋಧ ನಡೆಸುತ್ತಿದ್ದಾರೆ.
ಇದನ್ನು ಓದಿ: ಶಿವರಾಮ ಕಾರಂತ್ ಲೇಔಟ್ ನಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಅರ್ಹತಾ ಪ್ರಮಾಣ ಪತ್ರ ವಿತರಣೆ
ಎಸಿಬಿ ಅಧಿಕಾರಿಗಳು ಬಿಡಿಎ ಕಚೇರಿ ಪ್ರವೇಶಿಸುತ್ತಿದ್ದಂತೆ ಅವರ ತಂಡದ ಪೇದೆಗಳು ಒಳ ಹೋಗುವ ಮತ್ತು ಹೊರ ಬರುವ ಎಲ್ಲಾ ಗೇಟ್ ಗಳನ್ನು ಬಂದ್ ಮಾಡಿದರು. ಬಿಡಿಎ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಎಸಿಬಿ ತಂಡದಲ್ಲಿ ಮೂವರು ಎಸ್.ಪಿ., ಐವರು ಡಿವೈಎಸ್ಪಿ, ಹನ್ನೆರಡು ಮಂದಿ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 50 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಪ್ರತಿಯೊಬ್ಬ ಅಧಿಕಾರಿ ನೇತೃತ್ವದಲ್ಲಿ ಉಪ ತಂಡಗಳು ರಚನೆಯಾಗಿವೆ. ಇವರೆಲ್ಲರೂ ಮೊದಲಿಗೆ ಉಪಕಾರ್ಯದರ್ಶಿಗಳ ಕಚೇರಿ ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಉಪಕಾರ್ಯದರ್ಶಿ ಕಚೇರಿಯ ವಿರುದ್ಧ ಹಲವು ದೂರುಗಳು ಬಂದಿವೆ. ಪದೇಪದೇ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿದೆ. ವಿಶೇಷ ಭೂ ಸ್ವಾಧಿನ ಅಧಿಕಾರಿಗಳ ಕಚೇರಿ ಮೇಲೆ ಸಹ ದಾಳಿ ಮಾಡಲಾಗಿದೆ. ಪರಿಶೀಲನೆ ನಡೆಯುತ್ತಿದೆ. ನೂರಾರು ಕಡತಗಳನ್ನ ಪರಿಶೀಲನೆ ಮಾಡಲಾಗುತ್ತಿದೆ. ಕಂಪ್ಯೂಟರ್ ನಲ್ಲಿ ಇರುವ ಕಡತಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ.
ಬಿಡಿಎ ಕಚೇರಿ ಆವರಣದಲ್ಲಿ ದಾಖಲೆಗಳಿದ್ದ ಕಾರು ವಶ
ಇಂದು ಮಧ್ಯಾಹ್ನ ನಗರದ ಬಿಡಿಎ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅ್ಲಲಿದ್ದ ವಾಹನಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ಅಪಾರ ದಾಖಲೆಗಳಿದ್ದ ಕಾರೊಂದನ್ನು ಅದರ ಚಾಲಕನ ಸಮೇತ ವಶಕ್ಕೆ ಪಡೆದರು.
ಕಾರು ಪರಿಶೀಲಿಸಿದಾಗ ಬ್ಯಾಗುಗಟ್ಟಲೇ ದಾಖಲೆಗಳಿದ್ದ ಕಾರಣ ಅನುಮಾನದ ಮೇಲೆ ಕಾರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಕಾರಿನ ಮಾಲೀಕ ಇರಲಿಲ್ಲ. ಅವರು ಕೆಲಸದ ಮೇಲೆ ಹೋಗಿದ್ದಾರೆ ಎಂದು ಚಾಲಕ ಉತ್ತರ ನೀಡಿದ್ದರು. ಇದರಿಂದ ಸಮಾಧಾನವಾಗದ ಅಧಿಕಾರಿಗಳು ಮಾಲೀಕರನ್ನು ಕರೆಸುವಂತೆ ಹೇಳಿದ್ದರು.
ಎಸಿಬಿ ಅಧಿಕಾರಿ ಚಾಲಕನಿಂದ ಮಾಲೀಕರ ನಂಬರ್ ಪಡೆದು ಪೋನ್ ಮಾಡಿ ಕೂಡಲೇ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದರು. ಇದರಂತೆ ಮಾಲೀಕ ಸ್ಥಳಕ್ಕೆ ಧಾವಿಸಿದರು. ವಿಚಾರಿಸಿದಾಗ ಅವರು ನಗರದ ವಕೀಲ ವಿಶ್ವನಾಥ್, ದಾಖಲೆಗಳಿದ್ದ ಫಾರ್ಚುನರ್ ಕಾರ್ ಅವರದೆಂದು ತಿಳಿಯಿತು.
ಈ ನಂತರ ಅಧಿಕಾರಿಗಳು ಕಾರಿನಲ್ಲಿದ್ದ ದಾಖಲೆಗಳನ್ನು ವಿವರವಾಗಿ ಪರಿಶೀಲಿಸಿದರು. ಅದರಲ್ಲಿ ಯಾವುದೇ ಅನುಮಾನಸ್ಪದ ಕಾಗದ ಪತ್ರಗಳು ಇಲ್ಲದ ಕಾರಣ ಕಾರು ಮತ್ತು ಚಾಲಕರನ್ನು ಬಿಟ್ಟು ಕಳಿಸಿದರು.