'ತುಂಟ ಕೋತಿಗಳಿವೆ': ಎಸ್‌ವಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿದ ಮಂಗಗಳ ಕಾಟ; ಸಾರ್ವಜನಿಕರಿಗೆ ಎಚ್ಚರಿಕೆಯ ಫಲಕ!

ನಗರದ ಸ್ವಾಮಿ ವಿವೇಕಾನಂದ ರಸ್ತೆ (ಎಸ್‌ವಿ ರಸ್ತೆ) ಮೆಟ್ರೋ ನಿಲ್ದಾಣಕ್ಕೆ ಆಗಮಿಸುವ ಅಥವಾ ಮೆಟ್ರೋದಿಂದ ಹೊರ ಹೋಗುವ ಪ್ರಯಾಣಿಕರಿಗೆ ಹೊಸ ಸಮಸ್ಯೆಯೊಂದು ಕಾಡಲು ಆರಂಭವಾಗಿದೆ.
ಮೆಟ್ರೋ ನಿಲ್ದಾಣದಲ್ಲಿ ಕುಳಿತಿರುವ ಮಂಗ.
ಮೆಟ್ರೋ ನಿಲ್ದಾಣದಲ್ಲಿ ಕುಳಿತಿರುವ ಮಂಗ.
Updated on

ಬೆಂಗಳೂರು: ನಗರದ ಸ್ವಾಮಿ ವಿವೇಕಾನಂದ ರಸ್ತೆ (ಎಸ್‌ವಿ ರಸ್ತೆ) ಮೆಟ್ರೋ ನಿಲ್ದಾಣಕ್ಕೆ ಆಗಮಿಸುವ ಅಥವಾ ಮೆಟ್ರೋದಿಂದ ಹೊರ ಹೋಗುವ ಪ್ರಯಾಣಿಕರಿಗೆ ಹೊಸ ಸಮಸ್ಯೆಯೊಂದು ಕಾಡಲು ಆರಂಭವಾಗಿದೆ.

ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಮಂಗಗಳ ಕಾಟ ಶುರುವಾಗಿದೆ. ನಿಲ್ದಾಣದಲ್ಲಿ ನಿಲ್ಲುವ ಜನರ ಕೈಗಳಲ್ಲಿದ್ದ ಬ್ಯಾಗ್, ದುಪಟ್ಟಾ, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಮಂಗಗಳಲು ಕಸಿದು ಪರಾರಿಯಾಗುತ್ತಿದ್ದು, ಮಂಗಗಳ ಕಾಟಕ್ಕೆ ಜನರು ಕಕ್ಕಾಬಿಕ್ಕಿಯಾಗುತ್ತಿದ್ದಾರೆ. ಪ್ರತೀನಿತ್ಯ ಈ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು, ಹೀಗಾಗಿ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಚೀಟಿಗಳನ್ನು ಅಂಟಿಸುತ್ತಿದ್ದಾರೆ.

ಮೆಟ್ರೋ ನಿಲ್ದಾಣದ ಕೆಲ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆದಿರುವ ಅಕ್ಷರಗಳೊಂದಿಗೆ 'ತುಂಟ ಮಂಗಗಳಿವೆ' ಎಚ್ಚರಿಕೆಯಿಂದಿರುವಂತೆ ಪತ್ರಗಳನ್ನು ಅಂಟಿಸಿದ್ದಾರೆ.

ಸಮಸ್ಯೆ ಕುರಿತು ಬಿಎಂಆರ್'ಸಿಎಲ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಅರಣ್ಯಾ ಇಲಾಖೆಗೆ ಪತ್ರ ಬರೆದಿದ್ದು, ಸಮಸ್ಯೆ ದೂರಾಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಈ ಪ್ರದೇಶದಲ್ಲಿ ಮಂಗಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.

ಮಲ್ಲೇಶ್ವರಂ ನಲ್ಲಿರುವ ಅರಣ್ಯ ಇಲಾಖೆಯ ಕಚೇರಿಗೂ ಪತ್ರವನ್ನು ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಪತ್ರದಲ್ಲಿ ನಿಲ್ದಾಣದಲ್ಲಿ ಮಂಗಗಳು ಪ್ರಯಾಣಿಕರು ಬ್ಯಾಗ್, ಮೊಬೈಲ್ ಫೋನ್ ಗಳು ಇತರೆ ವಸ್ತುಗಳನ್ನು ಕಸಿದು ಪರಾರಿಯಾಗುತ್ತಿವೆ. ಅಲ್ಲದೆ, ಮಹಿಳಾ ಪ್ರಯಾಣಿಕರ ದುಪಟ್ಟಾಗಳನ್ನು ಎಳೆದಾಡುತ್ತಿವೆ. ಪ್ರಯಾಣಿಕರು ಗದರಿದರೆ ಉಗ್ರ ರೂಪದ ಕೋಪದಲ್ಲಿ ಅವರ ವಿರುದ್ಧ ತಿರುಗಿ ಬೀಳುತ್ತಿವೆ. ಇದರಿಂದ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆಂದು ಹೇಳಿಕೊಂಡಿದೆ.

ಈ ನಡುವೆ ಪ್ರಯಾಣಿಕರೂ ಕೂಡ ನಿಲ್ದಾಣದಲ್ಲಿ ಸಾಕಷ್ಟು ಬಾರಿ ಬರವಣಿಗೆ ಮೂಲಕ ಹಾಗೂ ಆನ್'ಲೈನ್ ಮೂಲಕ ತಮಗಾದ ಸಮಸ್ಯೆಗಳ ಕುರಿತು ದೂರುಗಳನ್ನು ದಾಖಲಿಸಿದ್ದಾರೆ.

"ಕೋವಿಡ್‌ಗಿಂತ ಮೊದಲು ಹಲಸೂರು ನಿಲ್ದಾಣದಲ್ಲಿ ಈ ಸಮಸ್ಯೆ ವಿಪರೀತವಾಗಿತ್ತು. ಆದರೆ, ಕೋವಿಡ್ ನಂತರ ಎಸ್‌ವಿ ರಸ್ತೆ ನಿಲ್ದಾಣದಲ್ಲಿ ಹೆಚ್ಚಾಗಿದೆ ಎಂದು ಸಿಬ್ಬಂದಿಗಳು ಹೇಳಿದ್ದಾರೆ.

ನಿಲ್ದಾಣದಲ್ಲಿ ಮಂಗಗಳ ಸಂಖ್ಯೆ ಕಡಿಮೆಯೇ ಇದ್ದರೂ, ಅವುಗಳು ನೀಡುತ್ತಿರುವ ಕಾಟ ಅಷ್ಟಿಷ್ಟಲ್ಲ. ನಿಲ್ದಾಣದಲ್ಲಿ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚು ಕಾಟ ನೀಡುತ್ತಿವೆ. ಮಹಿಳೆಯರ ಬ್ಯಾಗ್, ಊಟದ ಬ್ಯಾಗ್ ತೆಗೆದುಕೊಂಡು ಹೋಗಿ ಎತ್ತರದ ಪ್ಲಾಟ್ ಫಾರ್ಮ್ ಗಳಿಂದ ಕೆಳಗೆ ಎಸೆಯುತ್ತವೆ. ನಾಲ್ಕು ತಿಂಗಳ ಹಿಂದೆ ಭದ್ರತಾ ಸಿಬ್ಬಂದಿಯೊಬ್ಬರ ಫೋನ್ ಕಸಿದುಕೊಂಡು ಹೋಗಿ ಎಸೆದಿದ್ದವು. ಇದರಿಂದ ಫೋನ್ ಎರಡು ತುಂಡಾಗಿತ್ತು ಎಂದು ಮತ್ತೊಬ್ಬ ಸಿಬ್ಬಂದಿ ಹೇಳಿದ್ದಾರೆ.

ಮಹಿಳಾ ಪ್ರಯಾಣಿಕರೊಬ್ಬರು ನಡೆದು ಹೋಗುತ್ತಿದ್ದ ವೇಳೆ ಮಂಗವೊಂದು ಅವರ ಬ್ಯಾಗ್ ಕಸಿದುಕೊಂಡಿತ್ತು. ಈ ವೇಳೆ ಮಹಿಳೆ ಭಯದಿಂದ ಕಿರುಚಿದ್ದರು. ಸ್ಥಳದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಪ್ಲಾಟ್ ಫಾರ್ಮ್ ನಲ್ಲಿದ್ದ  ಬೆಂಕಿ ನಂದಿಸುವ ಯಂತ್ರವನ್ನು ತೆಗೆದುಕೊಂಡು ಮಂಗದ ಮೇಲೆ ಸ್ಪ್ರೇ ಮಾಡಿದ್ದರು. ಈ ವೇಳೆ ಬ್ಯಾಗ್ ಕೆಳಗೆ ಬಿಟ್ಟು ಮಂಗ ಸ್ಥಳದಿಂದ ಕಾಲ್ಕಿತ್ತಿತ್ತು ಎಂದು ಮತ್ತೊಬ್ಬ ಸಿಬ್ಬಂದಿ ತಿಳಿಸಿದ್ದಾರೆ.

ನಿಲ್ದಾಣದ ಒಂದು ಬದಿಯಲ್ಲಿ (ಐಸೋಲೇಷನ್ ಆಸ್ಪತ್ರೆ) ಮರಗಳಿದ್ದು, ಈ ಬಯಲು ಜಾಗವು ಕೋತಿಗಳ ನೆಲೆಯಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ ಅರಣ್ಯ ಇಲಾಕೆಯ ಅಧಿಕಾರಿಗಳು ನಿಲ್ದಾಣದಲ್ಲಿ ಕೋತಿಗಳ ಹಿಡಿಯಲು ಒಂದು ದಿನ ಕಾಲ ಕಳೆದಿದ್ದು, ಆ ದಿನ ಮಂಗಗಳು ಸ್ಥಳಕ್ಕೇ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಅರಣ್ಯಾಧಿಕಾರಿಗಳು ಯಾವಾಗ ಸ್ಥಳಕ್ಕೆ ಬರುತ್ತಾರೆ, ಯಾವಾಗ ಹೋಗುತ್ತಾರೆಂಬುದು ನಮಗೆ ತಿಳಿಯುವುದಿಲ್ಲ. ಆದರೆ, ಮಂಗಗಳು ಎಲ್ಲಿ ದಾಳಿ ಮಾಡುತ್ತವೋ ಎಂಬ ಭಯ ನಮಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com