ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಹಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ. ಇದುವರೆಗೆ ಮಳೆ ಸಂಬಂಧಿ ಅನಾಹುತಗಳಿಗೆ ರಾಜ್ಯದಲ್ಲಿ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 5 ಲಕ್ಷ ಹೆಕ್ಟೇರ್ ಗಿಂತಲೂ ಅಧಿಕ ಕೃಷಿಭೂಮಿಯಲ್ಲಿ ಬೆಳೆಹಾನಿಯಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಮಳೆಗೆ 658 ಮಳೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು 8 ಸಾವಿರದ 495 ಮನೆಗಳು ಭಾಗಶಃ ಹಾನಿಗೀಡಾಗಿವೆ. 191 ಪ್ರಾಣಿಗಳು ಮೃತಪಟ್ಟಿವೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಅಂಕಿಅಂಶ ನೀಡಿದೆ.
ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿತ್ತು.
ಬೆಂಗಳೂರಿನಲ್ಲಿ ಭಾರೀ ಮಳೆ: ಕಳೆದ ರಾತ್ರಿ ಬೆಂಗಳೂರು ನಗರದಲ್ಲಿ ಅವ್ಯಾಹತವಾಗಿ ಸತತ ಮಳೆ ಸುರಿದಿದ್ದು ಹಲವು ತಗ್ಗು ಪ್ರದೇಶಗಳಲ್ಲಿ ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ. ಯಲಹಂಕ, ವಿದ್ಯಾರಣ್ಯಪುರ, ಅಳ್ಳಾಳಸಂದ್ರ ಕೆರೆ ಸುತ್ತಮುತ್ತ, ಸಿಂಗಾಪುರ ಲೇಔಟ್ ಪ್ರದೇಶಗಳು ಅಕ್ಷರಶಃ ಜಲಪ್ರಳಯವಾಗಿದೆ. ಮಳೆಗೆ ಅನೇಕ ಅಂಡರ್ ಪಾಸ್ ಗಳು ಮುಳುಗಿವೆ. ಮಳೆಗೆ ರಸ್ತೆಗಳು ಕೆರೆಯಂತಾಗಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಯಲಹಂಕ-ಚಿಕ್ಕಬಳ್ಳಾಪುರ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾಗಿದೆ.
ಅಕಾಲಿಕ ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಧಾರಾಕಾರ ಮಳೆಗೆ ರಸ್ತೆಗಳೇ ಕೆರೆಗಳಂತಾಗಿವೆ, ಅನೇಕ ಕಡೆ ಮನೆ, ಅಂಗಡಿಗಳು, ಮದುವೆ ಚೌಟ್ರಿಗಳಿಗೆ ನೀರು ನುಗ್ಗಿದೆ.
ವಿದ್ಯಾರಣ್ಯಪುರದ ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟ್ ಸೇರಿದಂತೆ ಕೆಲ ಅಪಾರ್ಟ್ ಮೆಂಟ್ ಗಳ ನೆಲಮಹಡಿಯವರೆಗೆ ನೀರು ತುಂಬಿದ್ದು ಜನರು ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ. ನೆಲಮಹಡಿಯಲ್ಲಿರುವ ಮನೆಗೆ ನೀರು ನುಗ್ಗುತ್ತಿರುವುದರಿಂದ ಜನರನ್ನು ಸ್ಥಳಾಂತರ ಮಾಡುವ ಕೆಲಸವನ್ನು ಬಿಬಿಎಂಪಿ ಸಿಬ್ಬಂದಿ ಮಾಡುತ್ತಿದ್ದಾರೆ. ನಿವಾಸಿಗಳು ತಮ್ಮ ಮನೆಯ ವಸ್ತುಗಳು ನೀರಿನಿಂದ ಒದ್ದೆಯಾಗಿ ಪರದಾಡುತ್ತಿದ್ದಾರೆ. ನಿವಾಸಿಗಳಿಗೆ ಹಾಲು, ಬಿಸ್ಕತ್ತು, ನೀರು ಒದಗಿಸುವ ಕಾರ್ಯ ನಡೆಯುತ್ತಿದೆ.
ಭಾರೀ ಮಳೆಯ ರಭಸಕ್ಕೆ ಬೆಂಗಳೂರಿನ ವಿದ್ಯಾರಣ್ಯಪುರ, ಯಲಹಂಕ, ಜಾಲಹಳ್ಳಿ ಕ್ರಾಸ್, 8ನೇ ಮೈಲಿ, ಬೆಂಗಳೂರಿನ ಕೇಂದ್ರ ಪ್ರದೇಶಗಳಾದ ಮಂತ್ರಿಮಾಲ್, ಮೆಜೆಸ್ಟಿಕ್, ಸದಾಶಿವನಗರ, ಓಕುಳಿಪುರಂ, ನಾಯಂಡಳ್ಳಿ ಕೆಳ ಸೇತುವೆ ರಸ್ತೆ, ದತ್ತಾತ್ರೇಯನಗರ, ಹೊಸಕೆರೆಹಳ್ಳಿಯಲ್ಲಿ ಭಾರೀ ಅವಾಂತರವಾಗಿದೆ. ಆರ್.ಆರ್. ನಗರ, ಮೈಸೂರು ರಸ್ತೆ, ಗಾಳಿ ಅಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಬನ್ನೇರಘಟ್ಟ ರಸ್ತೆ, ಬಿಳಿಕಳ್ಳಿ, ಅರಕೆರೆ, ಕೋರಮಂಗಲ, ವಿಲ್ಸನ್ ಗಾರ್ಡನ್ ಮುಳುಗಿ ಹೋಗುತ್ತವೆ. ಲಾಲ್ಬಾಗ್ ರೋಡ್, ಶಾಂತಿನಗರ, ಬಾಪೂಜಿ ನಗರ ಹಾಗೂ ಹೊಸಗುಡ್ಡದಹಳ್ಳಿಯಲ್ಲಿ ಅನಾಹುತಗಳು ಸೃಷ್ಟಿಯಾಗಿದೆ.
Advertisement