ಬೆಂಗಳೂರಿನ ಸಿಂಗಾಪುರ ಜಲಾವೃತ: ನಿವಾಸಿಗಳು ಅಸಹಾಯಕ; ಆತಂಕ, ಆಕ್ರೋಶ!

ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರೆ ಕೋಡಿ ಒಡೆದು ನಗರದ ಸಿಂಗಾಪುರ ಬಡಾವಣೆ ಜಲಾವೃತಗೊಂಡಿದ್ದು, ಅಪಾರ್ಟ್‌ಮೆಂಟ್‌ಗಳಿಗೆಲ್ಲ ನೀರು ನುಗ್ಗುತ್ತಿದ್ದು, ನಿವಾಸಿಗಳಿಗೆ ಹಾವುಗಳ ಕಾಟ ಶುರುವಾಗಿದೆ.
ಸಿಂಗಾಪುರ ಬಡಾವಣೆ ಜಲಾವೃತ
ಸಿಂಗಾಪುರ ಬಡಾವಣೆ ಜಲಾವೃತ

ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರೆ ಕೋಡಿ ಒಡೆದು ನಗರದ ಸಿಂಗಾಪುರ ಬಡಾವಣೆ ಜಲಾವೃತಗೊಂಡಿದ್ದು, ಅಪಾರ್ಟ್‌ಮೆಂಟ್‌ಗಳಿಗೆಲ್ಲ ನೀರು ನುಗ್ಗುತ್ತಿದ್ದು, ನಿವಾಸಿಗಳಿಗೆ ಹಾವುಗಳ ಕಾಟ ಶುರುವಾಗಿದೆ.

ನಿನ್ನೆ ರಾತ್ರಿ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಯಿತು. ಪರಿಣಾಮವಾಗಿ ಎಲ್ಲೆಡೆ ನೀರು ಹರಿದಿದೆ. ಸಿಂಗಾಪುರ ಬಡಾವಣೆಯಲ್ಲಿ ಕೆರೆ ಕೋಡಿ ಒಡೆದ ಪರಿಣಾಮ ಸುಮಾರು 700 ಮನೆಗಳಿರುವ ಅಪಾರ್ಟ್‌ಮೆಂಟ್‌ ಜಲಾವೃತಗೊಂಡಿದೆ. ಈ ವೇಳೆ ಹಾವುಗಳನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ನೀರು ನುಗ್ಗುತ್ತಿರುವ ಸಂದರ್ಭದಲ್ಲಿ ಹಾವೊಂದು ಮೀನನ್ನು ನುಂಗುತ್ತಿರುವ ದೃಶ್ಯವನ್ನು ಕಂಡು ಜನರು ಆತಂಕಗೊಂಡಿದ್ದಾರೆ.

ಸಿಂಗಾಪುರ ಲೇಔಟ್ ಪಕ್ಕದ ವಾರ್ಡ್ 11 ಕುವೆಂಪುನಗರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ಮಳೆ ಹೊಡೆತಕ್ಕೆ ಲ್ಯಾಂಡ್‌ ಮಾರ್ಕ್ ಡ್ರೀಮ್ಸ್ ಅಪಾರ್ಟ್‌ಮೆಂಟ್‌ ಕಾಂಪೌಂಡ್ ಗೋಡೆ ಕುಸಿದಿದೆ. ಅಲ್ಲದೇ ಅಪಾರ್ಟ್‌ಮೆಂಟ್‌ನ ಪಾರ್ಕ್ ಪ್ಲಾಟ್ ಸಂಪೂರ್ಣ ಕೆಸರುಮಯವಾಗಿದೆ. ಪಾರ್ಕಿಂಗ್‌ ಮಾಡಲಾಗಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ನೀರಿನಲ್ಲಿ ಮುಳುಗಿವೆ. ರಾಜಕಾಲುವೆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ. ರಾಜಕಾಲುವೆ ಮುಚ್ಚಿರುವುದಿಂದ ರೋಡ್ ಗೆ ನೀರು ಬಂದಿದೆ ಎಂದು ಸಿಂಗಾಪುರ ಬಡಾವಣೆ ಜನರು ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಕೆರೆ ಕೊಡಿ ಒಡೆದಿಲ್ಲ. ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವಾಗ ರಾಜಕಾಲುವೆ ಮುಚ್ಚಿ ರಸ್ತೆ ಮಾಡಿದ್ದಾರೆ. ಸಿಂಗಾಪುರ ಗ್ರಾಮದಲ್ಲಿ ಸಿಂಗಾಪುರ ‌ಕೆರೆ ತುಂಬಿದಾಗ, ಆ ನೀರು ರಾಜಕಾಲುವೆ ಮೂಲಕ ಹರಿಯಬೇಕಿತ್ತು. ಆದ್ರೆ ರಾಜಕಾಲ ಮುಚ್ಚಿರುವುರಿಂದ ನೀರು ಅಪಾರ್ಟ್ಮೆಂಟ್ ಹಾಗೂ ಮನೆಗಳಿಗೆ ನುಗ್ಗುತ್ತಿದೆ ಎಂದು ನಿವಾಸಿ ಮೋಹನ್ ದೂರಿದ್ದಾರೆ.

ಇನ್ನು ಮಾಜಿ ಕಾರ್ಪೊರೇಟರ್ ಪೃಥ್ವಿರಾಜನ್ ಮಾತನಾಡಿ, ಇಲ್ಲಿ ಯಾವುದೇ ರಾಜಕಾಲುವೆ ನಾನು ನೋಡಿಲ್ಲ.ಆದ್ರೆ ನಿನ್ನೆಯಿಂದ ಇಲ್ಲಿನ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇನೆ. ಈ ಹಿಂದೆ ಸರ್ಕಾರ ಈ ಕೆರೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿತ್ತು. ಮಂಜೂರಾಗಿದ್ದ ಹಣವನ್ನು ಸರ್ಕಾರ ವಾಪಸ್ ತೆಗೆದುಕೊಂಡಿರುವುದರಿಂದ ಕೆರೆ ಅಭಿವೃದ್ಧಿ ಮಾಡೋಕೆ ಆಗಿಲ್ಲ ಎಂದರು. ಈ ರಸ್ತೆಯಲ್ಲಿ 650 ಮನೆಗಳು ಹಾಗೂ ಅಪಾರ್ಟ್ಮೆಂಟ್ ನಲ್ಲಿ 200 ಮನೆಗಳು ಇವೆ. ನಿವಾಸಿಗಳೆಲ್ಲ ಸಂಪರ್ಕಕ್ಕಾಗಿ ರಸ್ತೆ ಕೇಳಿದಾಗ ನಾವು ಈ ರಸ್ತೆ ಮಾಡಿದ್ದೇವೆ. ಸರ್ಕಾರದ ಫಂಡ್ ವಾಪಸ್ ಪಡೆಯಲ್ಲಿಲ್ಲವೆಂದಿದ್ದರೆ ಕೆರೆ ಕೋಡಿ ನೀರು ರಾಜಕಾಲುವೆಯಲ್ಲೇ ಹೋಗುತ್ತಿತ್ತು. ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದೇ ಇದಕ್ಕೆ ಕಾರಣವೆಂದು ಮಾಜಿ ಕಾರ್ಪೊರೇಟರ್ ಪ್ರಥ್ವಿರಾಜನ್ ಆರೋಪಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com