ಅವ್ಯಾಹತ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳಿಗೆ ಹಾನಿ: ಬಿಬಿಎಂಪಿ ಎಂಜಿನಿಯರ್ ಗಳೊಂದಿಗೆ ಸಿಎಂ ಬೊಮ್ಮಾಯಿ ಇಂದು ಸಭೆ, ಚರ್ಚೆ

ಈ ವರ್ಷ ಬೆಂಗಳೂರು ನಗರದಲ್ಲಿ ಸುರಿದ ಅಕಾಲಿಕ ಹೆಚ್ಚಿನ ಮಳೆಯಿಂದ ರಾಜಕಾಲುವೆ ತುಂಬಿ ಹರಿದು ಮನೆಗೆ ನೀರು ನುಗ್ಗಿ ಜನರಿಗೆ ಸಾಕಷ್ಟು ತೊಂದರೆಯಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ(ಸಂಗ್ರಹ ಚಿತ್ರ)
ಸಿಎಂ ಬಸವರಾಜ ಬೊಮ್ಮಾಯಿ(ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರಿನಲ್ಲಿ ವಾರ ಕಾಲ ಸುರಿದ ಭಾರಿ ಮಳೆಯಿಂದಾಗಿ ಅತಿ ಹೆಚ್ಚು ಹಾನಿಯಾಗಿದೆ. ರಾಜಧಾನಿಯಾದ್ಯಂತ ಬಿದ್ದ ಮಳೆ ನೀರು ಸರಿಯಾಗಿ ಹರಿದು ಹೋಗದ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ರಾಜಕಾಲುವೆಗಳ ದುರಸ್ಥಿ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಬಿಎಂಪಿಯಲ್ಲಿ ಎಲ್ಲ ಇಂಜಿನಿಯರ್ ಗಳ ಸಭೆ ಕರೆದಿದ್ದಾರೆ.

ಈ ಕುರಿತು ಆರ್ ಟಿ ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಸಿಎಂ, ಇವತ್ತು 12 ಗಂಟಗೆ ಬಿಬಿಎಂಪಿಯಲ್ಲಿ ಎಲ್ಲ ಇಂಜಿನಿಯರ್ ಗಳ ಸಭೆ ಕರೆದಿದ್ದೇವೆ. ಮುಖ್ಯವಾಗಿ ಹೆಚ್ಚಿನ ಮಳೆ ಬಂದಾಗ ರಾಜಕಾಲುವೆ ತುಂಬಿ ಹರಿದು ಜನರಿಗೆ ಸಮಸ್ಯೆಗಳು ಉಂಟಾಗುತ್ತಿವೆ. ಮನೆಗಳಿಗೆ ನೀರು ನುಗ್ಗಿರುವ ಉದಾಹರಣೆಗಳಿವೆ. ರಾಜಕಾಲುವೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ತೆಗೆದುಕೊಂಡಿರುವ ಕಾಮಗಾರಿಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುವುದು. ಎಲ್ಲೆಲ್ಲಿ ಕಾಲುವೆ ನೀರು ಹೊರಗೆ ಹರಿದು ಹೋಗುತ್ತಿದೆ ಅನ್ನೋದನ್ನು ಪರಿಶೀಲಿಸುವುದು ಹಾಗೂ ಕೂಡಲೆ ರಿಪೇರಿ ಕಾರ್ಯ ಕೈಗೊಳ್ಳುವ ಸಂಬಂಧ ಇಂಜಿನಿಯರಿಂಗ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದೇವೆ ಅಂತಾ ತಿಳಿಸಿದರು.

ಈ ಸಭೆಗೂ ಮುನ್ನ ಮುಖ್ಯಮಂತ್ರಿ ಬೊಮ್ಮಾಯಿ, ಮಳೆಯಿಂದ ಹಾನಿಗೊಳಗಾದ ಬೆಂಗಳೂರಿನ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿರಡಿ ಸಾಯಿ ಬಡಾವಣೆ ಹಾಗೂ ಹೆಣ್ಣೂರು ಮುಖ್ಯರಸ್ತೆಯ ಪಟೇಲ್ ಮುನಿಶಾಮಪ್ಪ ಬಡಾವಣೆಯಲ್ಲಿ ಮಳೆಯಿಂದ ಉಂಟಾದ ಸಮಸ್ಯೆ ಹಾಗೂ ತೊಂದರೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com