ಬೆಂಗಳೂರು: ಲಸಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ, ಗನ್ ನಿಂದ ಬೆದರಿಸಿ ದರೋಡೆ

ಕೊರೋನಾ ವೈರಸ್ ಗೆ ಲಸಿಕೆ ನೀಡುವ ಆರೋಗ್ಯ ಕಾರ್ಯಕರ್ತರ ಸೋಗಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದರೋಡೆ ಮಾಡಿರುವ ಘಟನೆ ಯಶವಂತಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದರೋಡೆ (ಸಾಂದರ್ಭಿಕ ಚಿತ್ರ)
ದರೋಡೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕೊರೋನಾ ವೈರಸ್ ಗೆ ಲಸಿಕೆ ನೀಡುವ ಆರೋಗ್ಯ ಕಾರ್ಯಕರ್ತರ ಸೋಗಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದರೋಡೆ ಮಾಡಿರುವ ಘಟನೆ ಯಶವಂತಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯಶವಂತಪುರದ ಎಸ್‌ಬಿಎಂ ಕಾಲೋನಿಯ ಬೃಂದಾವನ ನಗರದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಸಂಪತ್‌ ಸಿಂಗ್‌ ಎಂಬುವವರ ಮನೆಯಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ.

ಕೊರೋನಾ ಲಸಿಕೆ (Covid vaccine) ಹಾಕುವ ವೈದ್ಯ ಸಿಬ್ಬಂದಿ ಸೋಗಿನಲ್ಲಿ ಮನೆ ಪ್ರವೇಶಿಸಿದ ದುಷ್ಕರ್ಮಿಗಳು, ಬಳಿಕ ಮನೆಯ ಸದಸ್ಯರಿಗೆ ಪಿಸ್ತೂಲ್‌ ತೋರಿಸಿ 50 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಯಶವಂತಪುರದ ಎಸ್‌ಬಿಎಂ ಕಾಲೋನಿಯ ನಿವಾಸಿ ಸಂಪತ್‌ ಸಿಂಗ್‌ ಅವರ ನಿವಾಸಕ್ಕೆ ದರೋಡೆಕೋರರು ನುಗ್ಗಿದ್ದು ಈ ವೇಳೆ ಸಂಪತ್‌ ಸಿಂಗ್‌ ಪತ್ನಿ ಪಿಸ್ತಾ ದೇವಿ ಮತ್ತು ಸೊಸೆ     ರಕ್ಷಾ ಇಬ್ಬರು ಮಾತ್ರ ಮನೆಯಲ್ಲಿದ್ದರು.  ಕಾರು ಹಾಗೂ ದ್ವಿಚಕ್ರ ವಾಹನದಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು, ತಾವು ಕೊರೋನಾ ಲಸಿಕೆ ನೀಡಲು ಬಂದಿದ್ದೇವೆ. ನೀವು 2ನೇ ಡೋಸ್ ಲಸಿಕೆ ಪಡೆದಿದ್ದೀರಾ ಎಂದು ವಿಚಾರಿಸುತ್ತಲೇ ಮನೆ ಪ್ರವೇಶಿಸಿದ್ದಾರೆ. ಬಳಿಕ ಏಕಾಏಕಿ ಪಿಸ್ತೂಲ್‌ ತೆಗೆದು ಇಬ್ಬರು ಮಹಿಳೆಯರನ್ನು ಹೆದರಿಸಿ, ಬೀರುವಿನಲ್ಲಿರಿಸಿದ್ದ 50 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

ದರೋಡೆ ವೇಳೆ ಮನೆಗೆ ಬಂದಿದ್ದ ಪುತ್ರ
ಇನ್ನು ದರೋಡೆ ನಡೆಯುತ್ತಿದ್ದ ವೇಳೆ ಸಂಪತ್ ಸಿಂಗ್ ಅವರ ಪುತ್ರ ವಿಕ್ರಮ್ ಸಿಂಗ್ ಮನೆಗೆ ಬಂದಿದ್ದ. ಆದರೆ ಈ ವೇಳೆ ಮನೆ ಬಾಗಿಲು ಲಾಕ್ ಆಗಿತ್ತು. ಮಕ್ಕಳಿಗೆ ಊಟದ ಡಬ್ಬಿ ಕೊಡುವಂತೆ ಜೋರಾಗಿ ಕೂಗಿದ. ಅಷ್ಟು ಹೊತ್ತಿಗಾಗಲೇ ದುಷ್ಕರ್ಮಿಗಳು ಇಬ್ಬರೂ ಮಹಿಳೆಯರನ್ನೂ ರೂಮಿನಲ್ಲಿ ಕೂಡಿ ಹಾಕಿದ್ದರು. ಬಳಿಕ ಮನೆಗೆ ಬಂದ ಅತಿಥಿಗಳಂತೆ ನಟಿಸಿ ಮನೆಯಿಂದ ಹೊರಗೆ ಬಂದು ದೂರದಲ್ಲಿ ನಿಲ್ಲಿಸಿದ್ದ ಕಾರು ಹಾಗೂ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. 

ಬಂದಿದ್ದವರು ಯಾರೆಂದು ಪರಿಶೀಲಿಸಲು ಮಗ ವಿಕ್ರಮ್ ಸಿಂಗ್ ಮನೆಯೊಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಘಟನೆ ಸಂಬಂಧ ಸಂಪತ್‌ ಸಿಂಗ್‌ ಅವರು ದೂರು ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು, ಘಟನಾ ಸ್ಥಳದ ಸಮೀಪದ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಯಶವಂತಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com