ಅ.8ಕ್ಕೆ ದೆಹಲಿಗೆ ಮುಖ್ಯಮಂತ್ರಿ ಬೊಮ್ಮಾಯಿ: ಸಂಪುಟ ವಿಸ್ತರಣೆ, ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಕುರಿತು ಚರ್ಚೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅ.8ರಂದು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಈ ವೇಳೆ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಅಧ್ಯಕ್ಷ ನೇಮಕ ಹಾಗೂ ರಾಜ್ಯದ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಕೇಂದ್ರ ಸಚಿವರು, ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅ.8ರಂದು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಈ ವೇಳೆ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಅಧ್ಯಕ್ಷ ನೇಮಕ ಹಾಗೂ ರಾಜ್ಯದ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಕೇಂದ್ರ ಸಚಿವರು, ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

ರಾಜ್ಯದ ಮುಖ್ಯಮಂತ್ರಿಗಳಾಗಿ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ 2 ತಿಂಗಳುಗಳಲ್ಲಿ ಬೊಮ್ಮಾಯಿ ಈ ವರೆಗೂ ನಾಲ್ಕು ಬಾರಿ ದೆಹಲಿಗೆ ಭೇಟಿ ನೀಡಿದ್ದು, ಅಕ್ಟೋಬರ್ 8ರಂದು ಮತ್ತೆ ದೆಹಲಿಗೆ ತೆರಳಿದರೆ, 5 ಬಾರಿ ದೆಹಲಿಗೆ ಭೇಟಿ ನೀಡಿದಂತಾಗುತ್ತದೆ. 

ರಾಜ್ಯದ 2 ಕ್ಷೇತ್ರದ ಉಪಚುನಾವಣೆಗೆ ಸಂಬಂಧಪಟ್ಟಂತೆ ಅಭ್ಯರ್ಥಿ ಅಂತಿಮಗೊಳಿಸಿ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯದ ಬಳಿಕ ಮುಖ್ಯಮಂತ್ರಿಗಳು ದೆಹಲಿಗೆ ತೆರಳಲಿದ್ದಾರೆ. 

ನಿಗದಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿರುವ ಬೊಮ್ಮಾಯಿಯವರು, ರಾಜ್ಯಕ್ಕೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯ, ಯೋಜನೆಗಳ ಬಗ್ಗೆಯೂ ಸಂಬಂಧಪಟ್ಟ ಕೇಂದ್ರದ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಅಗತ್ಯ ಇರುವ ಅನುಮೋದನೆ ಸೇರಿದಂತೆ ರಾಜ್ಯದ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುವಂತೆ ಮನವಿ ಮಾಡಲಿದ್ದಾರೆ. 

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ಇತರೆ ಕೇಂದ್ರ ಸಚಿವರನ್ನು ಬೊಮ್ಮಾಯಿಯವರು ಭೇಟಿ ಮಾಡಲಿದ್ದು, ರಾಜ್ಯದ ಆರ್ಥಿಕ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಮಾತುಕತೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ. 

ಇದೇ ವೇಳೆ ಪಕ್ಷದ ವರಿಷ್ಠರನ್ನೂ ಕೂಡ ಭೇಟಿ ಮಾಡುವ ಸಾಧ್ಯತೆಗಳಿದ್ದು, ರಾಜ್ಯ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

ಮಾಜಿ ಸಿಎಂ ಯಡಿಯೂರಪ್ಪ ಆಪ್ತರು ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಶೀಘ್ರಗತಿಯಲ್ಲಿ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸುತ್ತಿದ್ದು, ಆದರೆ, ಇದಕ್ಕೆ ದೆಹಲಿಯಲ್ಲಿರುವ ಕೆಲ ನಾಯಕರು ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಈಗಾಗಲೇ ದೆಹಲಿ ನಾಯಕರೊಂದಿಗೆ ಸಂಪರ್ಕ ಸಾಧಿಸಿರುವ ರಾಜ್ಯದ ಕೆಲ ನಾಯಕರು ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಗೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. 

ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಸೇರಿದಂತೆ ಇತರೆ ವಿಚಾರಗಳ ಬಗ್ಗೆಯೂ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com