ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ: ಪಂಚಮಸಾಲಿ 2ಎ ಮೀಸಲು ಹೋರಾಟ ತಾತ್ಕಾಲಿಕ ಸ್ಥಗಿತ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಡೆಸಲು ಉದ್ದೇಶಿರುವ ಧರಣಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭರವಸೆ ಮೇರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಡೆಸಲು ಉದ್ದೇಶಿರುವ ಧರಣಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭರವಸೆ ಮೇರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ ಸ್ವಾಮೀಜಿ ಜತೆ ಬೊಮ್ಮಾಯಿ ಸುದೀರ್ಘ ಮಾತುಕತೆ ನಡೆಸಿದರು. ಆ ಬಳಿಕ ಅವರು ಹೋರಾಟವನ್ನು ಕೈಬಿಡಲು ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ.

ಕಾನೂನಿನ ತೊಡಕುಗಳು, ಹಿಂದುಳಿದ ವರ್ಗದ ಆಯೋಗದಿಂದ ಸರ್ಕಾರ ವರದಿ ಕೇಳಿರುವ ವಿಚಾರದ ಬಗ್ಗೆ ಸ್ವಾಮೀಜಿಯವರಿಗೆ ವಿವರಿಸಿದ ಬೊಮ್ಮಾಯಿ, ‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿದೆ. ಆದ್ದರಿಂದ ಮತ್ತೆ ಹೋರಾಟ ನಡೆಸುವುದು ಬೇಡ’ ಎಂದು ಹೇಳಿದರು. ಬೊಮ್ಮಾಯಿಯವರ ಮನವಿಗೆ ಸ್ಪಂದಿಸಿದ ಸ್ವಾಮೀಜಿ ಸಮುದಾಯದ ಮುಖಂಡರ ಜತೆ ಮಾತುಕತೆ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿ, ‘ಮುಖ್ಯಮಂತ್ರಿ ಅವರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದು, ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ’ ಎಂದು ಪ್ರಕಟಿಸಿದರು.

ಸಭೆಯಲ್ಲಿ ಮಾತನಾಡಿರುವ ಸಚಿವ ಸಿಸಿ ಪಾಟೀಲ ಅವರು, ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದ ಬಗ್ಗೆ ಸರ್ಕಾರಕ್ಕೆ ಬದ್ಧತೆಯಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ತಕ್ಷಣ ಮೀಸಲಾತಿ ನಿರ್ಧಾರವನ್ನು ಜಾರಿಗೊಳಿಸಲಾಗುವುದು. ಮುಖ್ಯಮಂತ್ರಿಗಳೇ ಈ ಬಗ್ಗೆ ಭರವಸೆ ನೀಡಿದ್ದಾರೆ. ಮೀಸಲಾತಿ ಸಿಗುವ ದಿನ ಬರುತ್ತೆದೆ. ಆ ಬಗ್ಗೆ ವಿಶ್ವಾಸ ಇರಬೇಕು ಎಂದು ಸಲಹೆ ನೀಡಿದರು. 

ಸತ್ಯಾಗ್ರಹ ಮುಂದೂಡಲು ಸಮುದಾಯದ ನಾಯಕರು ಗಮನ ಹರಿಸಬೇಕು ಎಂದು ಮನವಿ ಮಾಡಿದ ಅವರು, ಹೋರಾಟ ಇರಲಿ, ಸತ್ಯಾಗ್ರಹ ಬೇಡ. ಒಳ್ಳೆಯ ದಿನಗಳು ಬರುತ್ತವೆ. ಆಶಾಭಾವನೆ ಜತೆ ಸತ್ಯಾಗ್ರಹ ಕೈಬಿಡಲು ಮನವಿ ಮಾಡುತ್ತೇನೆ ಎಂದು ವಿನಂತಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ವಾಮೀಜಿಗಳ ಜೊತೆ ಸಭೆ ನಡೆಸಿದ್ದರು. ಬೊಮ್ಮಾಯಿ ಅವರಷ್ಟು ಸುದೀರ್ಘ ಚರ್ಚೆ ಈವರೆಗೂ ಯಾವ ಮುಖ್ಯಮಂತ್ರಿಯೂ ನಡೆಸಿಲ್ಲ. ಇಷ್ಟುದಿನ ಮೀಸಲಾತಿ ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ ಈಗ ಮೀಸಲಾತಿ ನೀಡುವ ಅಧಿಕಾರ ರಾಜ್ಯಕ್ಕೆ ಸಿಕ್ಕಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ತಕ್ಷಣ ಮುಖ್ಯಮಂತ್ರಿಗಳು ಮೀಸಲಾತಿ ನಿರ್ಧಾರವನ್ನು ಜಾರಿ ಮಾಡುತ್ತಾರೆ. ಮೀಸಲಾತಿ ಸಿಗುವ ದಿನ ಬಂದೇ ಬರುತ್ತೆ. ಆ ಬಗ್ಗೆ ವಿಶ್ವಾಸ ಇರಲಿ. ನಾಳೆಯಿಂದ ಆರಂಭ ಮಾಡಬೇಕು ಎಂದುಕೊಂಡಿರುವ ಸತ್ಯಾಗ್ರಹ ಮುಂದೂಡಬೇಕೆಂದ ಮನವಿ ಮಾಡುತ್ತೇನೆ ಎಂದರು.

ವಿಜಯಾನಂದ ಕಾಶಪ್ಪನವರ್ ಅವರು ಮಾತನಾಡಿ, ಈ ವರೆಗೂ ಯಾವುದೇ ಮುಖ್ಯಮಂತ್ರಿಗಳು ತಮ್ಮ ಕಚೇರಿಗೆ ಕರೆದು ನಮ್ಮ ಆಗ್ರಹಗಳನ್ನು ಕೇಳುವ ಕೆಲಸ ಮಾಡಿರಲಿಲ್ಲ. ಆದರೆ, ಸಿಎಂ ಬೊಮ್ಮಾಯಿಯವರು ಮಾಡಿದ್ದಾರೆ. ಹೀಗಾಗಿ ಅವರ ಸಲಹೆಯಂತೆ ಮೂರು ತಿಂಗಳು ಕಾಯಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ. 
 
2 ಎ ಮೀಸಲಾತಿಗಾಗಿ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲು ಬೆಂಗಳೂರಿನಲ್ಲಿ ಶುಕ್ರವಾರ ಜಯಮೃತ್ಯುಂಜಯ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಲಿಂಗಾಯ ಪಂಚಮಸಾಲಿ ಟ್ರಸ್ಟ್ ಮತ್ತು ಮಹಾಸಭಾದ ಜಂಟಿ ಅಧಿವೇಶನ ಆೋಜಿಸಲಾಗಿತ್ತು. ಈ ಅಧಿವೇಶನಕ್ಕೂ ಮುನ್ನ ಸ್ವಾಮೀಜಿ ಮತ್ತು ಪಂಚಮಸಾಲಿ ಸಮುದಾಯದ ಪ್ರಮುಖರನ್ನು ಮುಖ್ಯಮಂತ್ರಿಗಳು ತಮ್ಮ ಕಚೇರಿಗೆ ಕರೆಸಿಕೊಂಡು ಸಂಧಾನ ಸಭೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com