ಜೆಬಿ ಕಾವಲ್ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣಕ್ಕೆ ನಾಗರಿಕರು, ಅರಣ್ಯ ಇಲಾಖೆ ಅಧಿಕಾರಿಗಳ ವಿರೋಧ

 ಜಾರಕಬಂಡೆ ಕಾವಲ್‌ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣ ಮಾಡುವ  ತೋಟಗಾರಿಕೆ ಸಚಿವ ಎನ್. ಮುನಿರತ್ನ ಅವರ ಘೋಷಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಾಗರಿಕರು ವಿರೋಧಿಸಿದ್ದಾರೆ.
ಜೆ ಬಿ ಕಾವಲ್ ಟ್ರೀ ಪಾರ್ಕ್
ಜೆ ಬಿ ಕಾವಲ್ ಟ್ರೀ ಪಾರ್ಕ್

ಬೆಂಗಳೂರು: ಜಾರಕಬಂಡೆ ಕಾವಲ್‌ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣ ಮಾಡುವ  ತೋಟಗಾರಿಕೆ ಸಚಿವ ಎನ್. ಮುನಿರತ್ನ ಅವರ ಘೋಷಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಾಗರಿಕರು ವಿರೋಧಿಸಿದ್ದಾರೆ. ಈ ಘೋಷಣೆ ಬೆನ್ನಲ್ಲೇ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಗಾಗಲೇ ಮೀಸಲು ಅರಣ್ಯದಲ್ಲಿ ಸರ್ವೆಯನ್ನು ಆರಂಭಿಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಪ್ರಸ್ತಾವನೆ ಅಥವಾ ಮನವಿ ನಮಗೆ ಬಂದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮೀಸಲು ಅರಣ್ಯದ  ಭಾಗವೊಂದನ್ನು ಈಗಾಗಲೇ ಟ್ರಿ ಪಾರ್ಕ್ ಆಗಿ ಮಾಡಲಾಗಿದ್ದು, ಉಳಿದ ಜಾಗದಲ್ಲಿಯೂ ಪಾರ್ಕ್ ಗಾಗಿ ಬಳಸಿಕೊಳ್ಳಲಾಗುತ್ತಿದೆ. ಜನರು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಗೆ ಭೇಟಿ ನೀಡಲು ಸಾಧ್ಯವಾಗದ ಕಾರಣ, ಉಳಿದಿರುವ ಇಂತಹ ಸ್ಥಳಗಳನ್ನು ವಾಯುವಿಹಾರಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಆದರೆ, ಇಂತಹ ಚಿಂತನೆ ಬಗ್ಗೆ ಅರಣ್ಯ ಇಲಾಖೆ ಹಾಗೂ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ.  ಈಗಾಗಲೇ ಜೆ ಬಿ ಕಾವಲ್ ಕೆರೆಯ ಸರ್ವೆ ನಂಬರ್ 101ರಲ್ಲಿ ಪೆರಿಪೆರಲ್ ರಿಂಗ್ ರೋಡ್ ನಿರ್ಮಿಸಲಾಗುತ್ತಿದೆ. 

ಮೀಸಲು ಅರಣ್ಯದಲ್ಲಿನ ಬತ್ತಿ ಹೋಗಿರುವ ಕೆರೆ ಭಾಗವನ್ನು ಖರಾಬ್ ಭೂಮಿ ಎಂದು ಪರಿಗಣಿಸಿ ಕಂದಾಯ ಇಲಾಖೆ ಈಗಾಗಲೇ ಖಾಸಗಿ ಮಾಲೀಕರಿಗೆ ನೀಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಸಿದ್ದಾರೆ, ಕೆರೆಯನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಅರಣ್ಯದಲ್ಲಿ ಅನೇಕ ಜೀವ ವೈವಿಧ್ಯತೆಯ ಪ್ರಾಣಿಗಳಿವೆ. ನರಿ, ಮೊಲ, ನವಿಲು ಅಂತಹ ಪ್ರಾಣಿಗಳಿದ್ದು, ಈ ಅರಣ್ಯವನ್ನು ರಕ್ಷಿಸಬೇಕಾಗಿದೆ. ಮೀಸಲು ಅರಣ್ಯವನ್ನು ಪಾರ್ಕ್ ಆಗಿ ಪರಿವರ್ತಿಸಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದೆ. ಅದಕ್ಕಾಗಿ ಈವರೆಗೂ ನಮ್ಮೊಂದಿಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ  ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಜೆಬಿ ಕಾವಲ್ ಮೀಸಲು ಅರಣ್ಯವೆಂದು 1896ರಲ್ಲಿಯೇ ಘೋಷಿಸಲ್ಪಟ್ಟಿದೆ. ಇದನ್ನು ತೋಟಗಾರಿಕೆ ಪಾರ್ಕ್ ಆಗಿ ಪರಿವರ್ತಿಸುವುದು ಅರಣ್ಯ ಸಂರಕ್ಷಣಾ ಕಾಯ್ದೆ 1980,  ಕರ್ನಾಟಕ ಅರಣ್ಯ ಕಾಯ್ದೆ 1963ರ ಉಲ್ಲಂಘನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ಸ್ಥಳೀಯರು ಕೂಡಾ ಸರ್ಕಾರದ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಮುಖ ಅರಣ್ಯ ಪ್ರದೇಶಗಳನ್ನು ಪಾರ್ಕ್ ಆಗಿ ಪರಿವರ್ತಿಸಬಾರದು ಎಂದು ಕೆ. ಮೀನಾಕ್ಷಿ ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com