ನೈತಿಕ ಪೊಲೀಸ್ ಗಿರಿ: ಸಿಎಂ ಬೊಮ್ಮಾಯಿ ಹೇಳಿಕೆಗೆ ತೀವ್ರ ಆಕ್ರೋಶ
ನೈತಿಕ ಪೊಲೀಸ್ ಗಿರಿ ಕುರಿತು ‘ಕ್ರಿಯೆ ನಡೆದಾಗ ಪ್ರತಿಕ್ರಿಯೆ ಬರುವುದು ಸಹಜ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ಇದೀಗ ತೀವ್ರ ಆಕ್ರೋಶ ಕಾರಣವಾಗಿದೆ.
Published: 14th October 2021 08:31 AM | Last Updated: 14th October 2021 08:31 AM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ನೈತಿಕ ಪೊಲೀಸ್ ಗಿರಿ ಕುರಿತು ‘ಕ್ರಿಯೆ ನಡೆದಾಗ ಪ್ರತಿಕ್ರಿಯೆ ಬರುವುದು ಸಹಜ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ಇದೀಗ ತೀವ್ರ ಆಕ್ರೋಶ ಕಾರಣವಾಗಿದೆ.
ನೈತಿಕ ಪೊಲೀಸ್ ಗಿರಿ ಕುರಿತು ನಿನ್ನೆ ಬೊಮ್ಮಾಯಿಯವರು ಹೇಳಿಕೆ ನೀಡಿದ್ದರು. ಪರಸ್ಪರರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸಹಜವಾಗಿಯೇ ಕ್ರಿಯೆ-ಪ್ರತಿಕ್ರಿಯೆಗಳು ಇದ್ದೇ ಇರುತ್ತದೆ. ಸಾಮಾಜಿಕವಾಗಿ ಸಾಮರಸ್ಯವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಹೇಳಿದ್ದರು. ಈ ಹೇಳಿಕೆಯ ವಿಡಿಯೋವನ್ನು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಲವರು ಮುಖ್ಯಮಂತ್ರಿಗಳ ಹೇಳಿಕೆಗ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, #BommaiStopMoralPolicing ಎಂಬ ಶೀರ್ಷಿಕೆಯಡಿ ಟ್ವಿಟರ್ ನಲ್ಲಿ ದೊಡ್ಡ ಅಭಿಯಾನವೇ ಆರಂಭವಾಗಿದೆ.
‘ಮತೀಯ ಗೂಂಡಾಗಿರಿ ನಡೆಸುತ್ತಿರುವ ಜನರನ್ನು ಬೆಂಬಲಿಸಿ ಮುಖ್ಯಮಂತ್ರಿಯವರೇ ಹೇಳಿಕೆ ನೀಡಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಮುಖ್ಯಮಂತ್ರಿಯವರ ಬೆಂಬಲವಿದೆ ಎಂದು ಇನ್ನೂ ದೊಡ್ಡ ಸಂಖ್ಯೆಯಲ್ಲಿ ಅಂತಹ ಕೃತ್ಯಗಳು ನಡೆಯುವ ಅಪಾಯವಿದೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ವಕ್ತಾರೆ ಲಾವಣ್ಯಾ ಬಲ್ಲಾಳ್ ಅವರು ಪ್ರತಿಕ್ರಿಯೆ ನೀಡಿ, ‘ರಾಜ್ಯದ ಮುಖ್ಯಮಂತ್ರಿಯೇ ಮತೀಯ ಗೂಂಡಾಗಿರಿಯನ್ನು ಬೆಂಬಲಿಸಿದ್ದಾರೆ. ಉಳಿದವರಿಂದ ಇನ್ನು ಏನನ್ನು ನಿರೀಕ್ಷಿಸಬಹುದು? ರಾಜ್ಯದ ಜನರೇ ದಯವಿಟ್ಟು ಸುರಕ್ಷಿತವಾಗಿರಿ. ಸರ್ಕಾರ ನಿಮ್ಮನ್ನು ರಕ್ಷಿಸುತ್ತದೆ ಎಂದು ಬಯಸಬೇಡಿ’ ಎಂದು ಹೇಳಿದ್ದಾರೆ.
ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ‘ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿದ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಕೆಲಸ. ಈ ಮಾತಿನಿಂದ ಮತೀಯವಾದಿಗಳು ಪ್ರಚೋದಿತರಾಗಿ ಬೀದಿಗಿಳಿಯವುದು ಖಚಿತ. ಈ ಮಾತಿಗಾಗಿ ಬೊಮ್ಮಾಯಿ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಪ್ರತಿಕ್ರಿಯೆ ನೀಡಿ, ಇಂತಹ ಎಚ್ಚರಿಕೆ ಇಲ್ಲದ ಹೇಳಿಕೆಗಳು ಜನರ ರಕ್ಷಣೆಯ ಕುರಿತು ಆತಂಕ ಹುಟ್ಟಿಸುತ್ತಿವೆ. ಜನರನ್ನು ರಕ್ಷಿಸುವುದು ಸರ್ಕಾರದ ಹೊಣೆ. ಆದರೆ, ಈ ಬೇಜವಾಬ್ದಾರಿ ಸರ್ಕಾರ ಜನರ ನಡುವೆ ಬೆಂಕಿ ಹಚ್ಚಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.