ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚನೆ, ಅಧ್ಯಾಪಕನ ಬಂಧನ

ಸರಕಾರಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಕಾಲೇಜು ಅಧ್ಯಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಅಲಿಯಾಸ್ ನಾಗರಾಜ್ ಬಂಧಿತ ಅರೋಪಿ.

ಬೆಂಗಳೂರು: ಸರಕಾರಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಕಾಲೇಜು ಅಧ್ಯಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಅಲಿಯಾಸ್ ನಾಗರಾಜ್ ಬಂಧಿತ ಅರೋಪಿ. ಈತ ಮೈಸೂರು ನಗರದ ಖಾಸಗಿ ಕಾಲೇಜೋಂದರಲ್ಲಿ ಅಧ್ಯಾಪಕನಾಗಿದ್ದು, ಡಿಟಿಪಿ ಸೆಂಟರ್ ಒಂದರಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದ ಯುವತಿಗೆ ವಂಚಿಸಿದ್ದಾನೆ. ಅದೇ ಡಿಟಿಪಿ ಸೆಂಟರ್ ಗೆ ಲೆಟರ್ ಹೆಡ್ ಟೈಪ್ ಮಾಡಿಸಲು ತೆರಳುತ್ತಿದ್ದ ಆರೋಪಿ ಸುರೇಶ್, ಸರ್ಕಾರಿ ಕೆಲಸ ಕೊಡಿಸೋದಾಗಿ ಯುವತಿಯನ್ನು ನಂಬಿಸಿದ್ದಾನೆ.

ಕೆಲವು ದಿನ ಕಳೆದ ನಂತರ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಇದ್ದು, ನೇಮಕಾತಿ ಆದೇಶ ಪಡೆಯಲು ಆರು ಲಕ್ಷ ಹಣ ಕೊಡಬೇಕಾಗುತ್ತದೆ ಎಂದು ಆರೋಪಿ ತಿಳಿಸಿದ್ದ. ಈತನ ಮಾತು ನಂಬಿದ ಯುವತಿ ಸಾಲಸೋಲ ಮಾಡಿ ಹಣ ಹೊಂದಿಸಿ ಕೊಟ್ಟಿದ್ದರು. ಈ ಬಳಿಕ ಬೇರೊಂದು ಡಿಟಿಪಿ ಸೆಂಟರ್ ನಲ್ಲಿ ‌ ಸರ್ಕಾರದ ಲೆಟರ್ ಹೆಡ್ ನಂತೆ ಮಾಡಿಸಿ, ಮಹಾರಾಣಿ ಕಾಲೇಜಿನಲ್ಲಿ ಎಫ್ ಡಿ ಎ ಎಂದು ಆಫರ್ ಲೆಟರ್ ಕೊಡಿಸಿದ್ದ. ಇದರಿಂದ ಖುಷಿಯಾದ ಯುವತಿ ಅಧ್ಯಾಪಕನಿಗೆ ಧನ್ಯವಾದ ತಿಳಿಸಿದ್ದರು.

ಆಫರ್ ಲೆಟರ್ ಸಹಿತ ವಿಧಾನ ಸೌಧದ ಎಂ. ಎಸ್. ಬಿಲ್ಡಿಂಗ್ ನ ಶಿಕ್ಷಣ ಇಲಾಖೆಗೆ ದಾಖಲೆ ಪರಿಶೀಲನೆಗೆ ಬಂದಾಗ ಸತ್ಯ ಬಯಲಿಗೆ ಬಂದಿದೆ. ಈ ನಂತರ ಶಿಕ್ಷಣ ಇಲಾಖೆಯಿಂದಲೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಇನ್ನೂ ಹಲವರಿಗೆ ವಂಚನೆ ಮಾಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com