ಬೆಂಗಳೂರು: ಅಕ್ಕನೊಂದಿಗೆ ಸಂಬಂಧ ಹೊಂದಿದ್ದ ಯುವಕನನ್ನು ಕೊಂದು ಠಾಣೆಗೆ ಶವತಂದು ಸಹೋದರ ಶರಣು
ಬೆಂಗಳೂರು: ವಿವಾಹವಾಗಿದ್ದ ತನ್ನ ಅಕ್ಕನೊಂದಿಗೆ ಸಂಬಂಧ ಬೆಳೆಸಿದ್ದ ಯುವಕನನ್ನು ಆಕೆಯ ಸಹೋದರ ಹಾಗೂ ಆತನ ಸಹಚರರು ಕೊಲೆ ಮಾಡಿ ಆಟೋದಲ್ಲಿ ಶವ ಇರಿಸಿಕೊಂಡು ಬಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
24 ವರ್ಷದ ಭಾಸ್ಕರ್ ಕೊಲೆಯಾದಾತ. ಮಾಲೂರು ಮೂಲದ ಮುನಿರಾಜು ಪ್ರಮುಖ ಬಂಧಿತ ಆರೋಪಿಯಾಗಿದ್ದು, ಈತನ ಸಹಚರರಾದ ಮಾರುತಿ, ನಾಗೇಶ್ ಹಾಗೂ ಪ್ರಶಾಂತ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಈ ಕುರಿತು ಪ್ರತಿಕ್ರಿಯಿಸಿ, ಈ ಹತ್ಯೆಗೆ ಕಾರಣಳಾದ ಮಹಿಳೆಯು ವಿವಾಹಿತೆಯಾಗಿದ್ದು, ಮೂಲತಃ ಮಾಲೂರಿನವಳು. ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ್ ಬಡಾವಣೆಯಲ್ಲಿ ವಾಸವಾಗಿದ್ದು, ಈಕೆಯ ಪತಿ ಊರಿನಲ್ಲೇ ನೆಲೆಸಿದ್ದ. ಈಕೆ ಒಬ್ಬಳೇ ನಗರದಲ್ಲಿ ನೆಲೆಸಿದ್ದು, ಜೀವನಕ್ಕಾಗಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಹೊಸೂರು ಬಳಿಯ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಭಾಸ್ಕರ್ನ ಪರಿಚಯವಾಗಿತ್ತು. ಕಾಲಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ವಿಷಯ ಮಹಿಳೆ ಮನೆಯಲ್ಲಿ ಗೊತ್ತಾಗಿದ್ದರಿಂದ ಪತಿಯೊಂದಿಗೆ ಜಗಳವಾಗಿತ್ತು. ಕಳೆದ 15 ದಿನಗಳ ಹಿಂದೆ ಮಾಲೂರಿನಿಂದ ನಗರಕ್ಕೆ ಬಂದು ಮನೆ ಮಾಡಿಕೊಂಡಿದ್ದಳು ಎಂದರು.
ಶನಿವಾರ ಸಂಜೆ ಮಹಿಳೆಯ ಮನೆಗೆ ಬಂದಿದ್ದ ಭಾಸ್ಕರ್, ಬೇರೆ ಮನೆ ಮಾಡಿಕೊಡುತ್ತೇನೆ ಎಂದು ಹೇಳಿ ಆಕೆಯನ್ನು ಕರೆದೊಯ್ಯಲು ಮುಂದಾಗಿದ್ದನು. ಈ ವೇಳೆ ಆಕೆಯ ಹಿರಿಮಗ ಭಾಸ್ಕರ್ ನೊಂದಿಗೆ ಬರಲು ನಿರಾಕರಿಸಿ ಸೋದರಮಾವ ಆಗಿರುವ ಆರೋಪಿ ಮುನಿರಾಜುಗೆ ಕರೆ ಮಾಡಿ ಎಲ್ಲಾ ಮಾಹಿತಿ ತಿಳಿಸಿದ್ದನು. ಆಟೋವೊಂದರಲ್ಲಿ ಭಾಸ್ಕರ್ ಹಾಗೂ ತಾಯಿ ಹೋಗುತ್ತಿರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಕ್ಷಣವೇ ಆರೋಪಿ ತನ್ನ ಆಟೋದೊಂದಿಗೆ ಭಾಸ್ಕರ್ನನ್ನು ಹಿಂಬಾಲಿಸಿದ್ದಾನೆ. ಸುಂಕದಕಟ್ಟೆ ಬಳಿ ಆಟೋ ಅಡ್ಡಹಾಕಿ ಅಕ್ಕನನ್ನು ಮನೆಗೆ ಕರೆತಂದು ಬಿಟ್ಟಿದ್ದಾನೆ ಎಂದರು.
ನಂತರ ತನ್ನ ಸಹಚರರನ್ನು ಕರೆದುಕೊಂಡು ಭಾಸ್ಕರ್ನನ್ನು ಆಟೋದಲ್ಲಿ ಕೂರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಭಾಸ್ಕರ್ ಹಸಿವು ಊಟ ಬೇಕು ಎಂದು ಬೇಡಿಕೊಂಡಿದ್ದಾನೆ. ಆಗ ಎಗ್ ರೈಸ್ ಕೊಡಿಸಿ ನಂತರ ಮತ್ತೇ ಆತನ ಹಲ್ಲೆ ಮಾಡಿದ್ದಾರೆ. ಈ ವೇಳೆ ಭಾಸ್ಕರ್ ಮೂರ್ಚೆ ಹೋಗಿದ್ದಾನೆ ಎಂದು ಆರೋಪಿಗಳು ಶಂಕಿಸಿದ್ದಾರೆ. ಆದರೆ, ಕೆಲ ಹೊತ್ತಿನ ಬಳಿಕ ಮೃತಪಟ್ಟಿರುವುದು ಗೊತ್ತಾಗುತ್ತಿದ್ದಂತೆ ತನ್ನ ತಾಯಿಗೆ ನಡೆದಿರುವ ವಿಷಯವನ್ನು ಮುನಿರಾಜು ತಿಳಿಸಿದ್ದಾನೆ ಎಂದರು.
ಬಳಿಕ ಆರೋಪಿಗಳು ಶವವನ್ನು ಆಟೋದಲ್ಲೇ ಇರಿಸಿಕೊಂಡು ಠಾಣೆಗೆ ಬಂದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ