ಚಿನ್ನ ಕಳ್ಳ ಸಾಗಣೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.1 ಕೆಜಿಗೂ ಅಧಿಕ ಚಿನ್ನ ವಶ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಸುಮಾರು 1.1 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
Published: 21st October 2021 02:03 PM | Last Updated: 21st October 2021 06:23 PM | A+A A-

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಸುಮಾರು 1.1 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಏರ್‌ಪೋರ್ಟ್ ಕಸ್ಟಮ್ಸ್‌ನ ವಾಯು ಗುಪ್ತಚರ ವಿಭಾಗವು ವಿಮಾನದಲ್ಲಿ ಅಡಗಿಸಿಟ್ಟು ಬಿಟ್ಟುಹೋಗಿದ್ದ ಸುಮಾರು 1 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನದಲ್ಲಿ ಶೋಧ ನಡೆಸಿದಾಗ 15 ಚಿನ್ನದ ಬಿಸ್ಕತ್ ಗಳು ಕಂಡುಬಂದವು. ಇದು 24ಕ್ಯಾರೆಟ್ ಚಿನ್ನವಾಗಿದ್ದು, ಇದರ ಬೆಲೆ ಸುಮಾರು 49.6 ಲಕ್ಷ ರೂ. ಮೌಲ್ಯದ್ದು ಎನ್ನಲಾಗಿದೆ. ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬೀಳುವ ಭಯದಿಂದ ಚಿನ್ನವನ್ನು ವಿಮಾನದಲ್ಲಿಯೇ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಇಂಡಿಗೋ ವಿಮಾನಯಾನ ಸಂಸ್ಥೆ ಈ ವರೆಗೂ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಅಂತೆಯೇ ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಬಂದಿಳಿದ ವಿಮಾನ ಸಂಖ್ಯೆ 6 ಇ 96 ವಿಮಾನದ ಓರ್ವ ಪ್ರಯಾಣಿಕ ಸುಮಾರು 100ಗ್ರಾಂ ಚಿನ್ನವನ್ನು ತನ್ನ ಬಾಯಿಯಲ್ಲಿ ಬಿಚ್ಚಿಟ್ಟುಕೊಂಡು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಯತ್ನಿಸಿದ್ದು, ಈ ವೇಳೆ ಅತನನ್ನು ಪರಿಶೀಲಿಸಿದ ಅಧಿಕಾರಿಗಳು ಆತನ ಬಳಿ ಇದ್ದ 100 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆಲೆ 4.88 ಲಕ್ಷ ಮೌಲ್ಯ ಎನ್ನಲಾಗಿದೆ. ಪ್ರಸ್ತುತ ಈ ಸಂಬಂಧ ಚೆನ್ನೈ ಮೂಲದ 45 ವರ್ಷದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.