ಆಹಾರ ವಿತರಣೆ ಸೋಗಿನಲ್ಲಿ, ದ್ವಿಚಕ್ರ ವಾಹನಗಳಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲ ಬೇಧಿಸಿದ ಸಿಸಿಬಿ
ರಾಜ್ಯದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ನೂತನ ಮಾದರಿಯೊಂದನ್ನು ಕಂಡುಕೊಂಡು ವ್ಯವಸ್ಥಿತವಾಗಿ ಸಾಗಣೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದೆ.
Published: 22nd October 2021 05:03 PM | Last Updated: 22nd October 2021 05:03 PM | A+A A-

ಬಂಧನ (ಸಾಂಕೇತಿಕ ಚಿತ್ರ)
ಬೆಂಗಳೂರು: ರಾಜ್ಯದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ನೂತನ ಮಾದರಿಯೊಂದನ್ನು ಕಂಡುಕೊಂಡು ವ್ಯವಸ್ಥಿತವಾಗಿ ಸಾಗಣೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದೆ.
ನಗರದ ಅಪರಾಧ ವಿಭಾಗದ ಪೊಲೀಸರು ಚಾಣಾಕ್ಷತೆಯಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಸ್ತುತ ಈ ಪ್ರಕರಣದಲ್ಲಿ ರವಿದಾಸ್, ರವಿ ಪ್ರಕಾಶ್ ಎಂಬ ಇಬ್ಬರು ಆರೋಪಿಗಳ ಬಂಧನವಾಗಿದೆ. 60 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರಿಗೆ ಅನುಮಾನ ಬಾರದಿರಲೆಂದು ಇವರು ನೂತನ ಮಾದರಿ ಕಂಡು ಕೊಂಡಿದ್ದರು. ಆಹಾರ ವಿತರಣೆ ಮಾಡುವ ಆ್ಯಪ್ ಗಳಲ್ಲಿ ಕೆಲಸ ಮಾಡುವ ವಿತರಕರು ಧರಿಸುವ ಮಾದರಿಯ ಉಡುಪುಗಳನ್ನು ಹಾಕಿಕೊಂಡು ದ್ವಿಚಕ್ರ ವಾಹನಗಳಲ್ಲಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರು.
ಕೆಲವೊಮ್ಮೆ ಪಾರ್ಸೆಲ್ ಗಳನ್ನು ಮನೆಗೆ ಬಂದು ತೆಗೆದುಕೊಂಡು ವಿತರಣೆ ಮಾಡುವವರ ಮಾದರಿ ಬಟ್ಟೆ ಧರಿಸಿ ಕಾರ್ಯಾಚರಣೆ ಮಾಡುತ್ತಿದ್ದರು. ನವದೆಹಲಿ ಮತ್ತು ಬೆಂಗಳೂರಿನಲ್ಲಿ ಏಕಕಾಲದಲ್ಲಿ ಈ ಜಾಲ ಮಾದಕ ವಸ್ತು ಸಾಗಣೆಯಲ್ಲಿ ನಿರತವಾಗಿತ್ತು. ಹೊರನೋಟಕ್ಕೆ ಬುಕ್ ರೀತಿ ಕಾಣುವ ಹಾಗೆ ವಿನ್ಯಾಸ ಮಾಡಿ ಅದರಲ್ಲಿ ಮಾದಕ ವಸ್ತುಗಳನ್ನು ಇಟ್ಟು ಸರಬರಾಜು ಮಾಡುತ್ತಿದ್ದರು.
ಈ ಮಾದರಿಯ ಪಾರ್ಸೆಲುಗಳನ್ನು ವಕೀಲರ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ಬಹು ಯೋಜಿತವಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು ಡಾರ್ಕ್ ವೆಬ್ ಮೂಲಕವೂ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಸೆಪ್ಟೆಂಬರ್ ನಲ್ಲಿ ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಇಬ್ಬರು ಮಾದಕ ವಸ್ತು ಕಳ್ಳ ಸಾಗಾಣೆದಾರರನ್ನು ಬಂಧಿಸಿದ್ದರು. ಇವರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ಕೈಗೊಂಡಾಗ ಬಹಳ ದೊಡ್ಡ ಜಾಲವೇ ಇರುವುದು ಪತ್ತೆಯಾಗಿದೆ.
ಬೆಂಗಳೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಬಾರದೆಂದು ನವದೆಹಲಿಯಲ್ಲಿಯೇ ಕುಳಿತುಕೊಂಡು ಜಾಲದ ಅವ್ಯವಹಾರ ನಡೆಸುತ್ತಿದ್ದರು, ಮಾದಕ ವಸ್ತುಗಳನ್ನು ಸಾಗಣೆ ಮಾಡಲು ಯುವ ವಿತರಕರನ್ನು ನೇಮಿಸಿಕೊಂಡಿದ್ದರು. ಇವರಿಗೆ ಪೋನ್, ಸಿಮ್, ವಸತಿ, ವಾಹನ ನೀಡುತ್ತಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಈ ಜಾಲದ ನಂಟಿರುವ ಇನ್ನೂ ಹಲವರನ್ನು ಬಂಧಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.