ತುಮಕೂರು: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತ ಇಬ್ಬರ ಸಾವು; ಬೈಕ್ ಮೇಲೆ ಬಸ್ ಹರಿದು ಸವಾರ ಬಲಿ!

ತುಮಕೂರಿನಲ್ಲಿ 2 ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರು ವ್ಯಕ್ತಿಗಳು ಕಾರಿಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ತುಮಕೂರು ಖಾಸಗಿ ಬಸ್ ಅಪಘಾತ
ತುಮಕೂರು ಖಾಸಗಿ ಬಸ್ ಅಪಘಾತ

ತುಮಕೂರು: ತುಮಕೂರಿನಲ್ಲಿ 2 ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರು ವ್ಯಕ್ತಿಗಳು ಕಾರಿಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ತುಮಕೂರಿನ ತಿಪಟೂರಿನಲ್ಲಿ ಈ ಘಟನೆ ನಡೆದಿದ್ದು, ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಇಬ್ಬರನ್ನು ತಡೆಯಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದು, ಈ ವೇಳೆ ಬೈಕ್ ಸವಾರರು ಅವರಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಬಳಿಕ ಪೊಲೀಸರು ತಮ್ಮ ಬೈಕ್ ನಲ್ಲಿ ಅವರನ್ನು ಚೇಸ್ ಮಾಡಿದ್ದು, ಹಿಂದೆ ಬರುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವೇಗವಾಗಿ ಬೈಕ್ ಚಲಾಯಿಸಿದ ಸವಾರರು ಮುಂದಿದ್ದ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ. 

ಈ ವೇಳೆ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸವಾರರನ್ನು ಬಳುವನೇರಾಳು ಗ್ರಾಮದ ಹಾಲು ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ನಾಗರಾಜು ಅಲಿಯಾಸ್ ನಾಗಣ್ಣ (64 ವರ್ಷ) ಮತ್ತು 45 ವರ್ಷದ ಚಿದಾನಂದ ಎಂದು ಗುರುತಿಸಲಾಗಿದೆ. ಇಬ್ಬರೂ ತಿಪಟೂರಿಗೆ ತೆರಳುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಹೊನ್ನವಳ್ಳಿ ಪೊಲೀಸ್ ಠಾಣಾ ಪೊಲೀಸರು ಹೆಲ್ಮೆಟ್ ಧರಿಸದೇ ಪ್ರಯಾಣಿಸುತ್ತಿದ್ದ ಅವರನ್ನು ತಡೆದು ದಾಖಲೆ ಪರಿಶೀಲಿಸಿದ್ದಾರೆ. ಈ ವೇಳೆ ಅವರ ಬಳಿ ಚಲನಾ ಪರವಾನಗಿ ಇರಲಿಲ್ಲ. ಬಳಿಕ ಇಬ್ಬರೂ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಪೊಲೀಸರು ಅವರನ್ನು ಬೆನ್ನಟ್ಟಿದ್ದು, ಆಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. 

ಅಪಘಾತದಲ್ಲಿ ಪೊಲೀಸರ ಪಾತ್ರವಿಲ್ಲ: ಇಲಾಖೆ ಸ್ಪಷ್ಟನೆ
ಇನ್ನು ಅಪಘಾತಕ್ಕೆ ಪೊಲೀಸರೇ ಕಾರಣ ಎಂಬ ಸ್ಥಳೀಯರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ಸಿಬ್ಬಂದಿ ಸಾಮಾನ್ಯದಂತೆ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬೈಕ್ ಸವಾರರು ಸಿಕ್ಕಿದ್ದು ಅವರ ಬಳಿ ಪರವಾನಗಿ ಇರಲಿಲ್ಲ. ಈ ವೇಳೆ ಅವರು ತಪ್ಪಿಸಿಕೊಂಡು ಹೋಗುವ ಭರದಲ್ಲಿ ವೇಗವಾಗಿ ಬೈಕ್ ಓಡಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಅರಕೆರೆಯಲ್ಲಿ ಮತ್ತೊಂದು ಅಪಘಾತ
ಇತ್ತ ಕೊರಟಗೆರೆ ರಾಜ್ಯ ಹೆದ್ದಾರಿಯ ಅರಕೆರೆ ಗ್ರಾಮದಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ವೇಗವಾಗಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೊದಲು ಬೈಕ್ ಗೆ ಢಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಪಕ್ಕದಲ್ಲಿದ್ದ ಮನೆಗೂ ಢಿಕ್ಕಿ ಹೊಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com