ಡೆಲ್ಟಾ ರೂಪಾಂತರಿ ವೈರಸ್ ಆತಂಕ: ಕೋವಿಡ್ ಲಸಿಕೆ ಅಭಿಯಾನ ಚರುಕುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ!

ರಾಜ್ಯದಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆಸಲಹೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ತಜ್ಞರು ರೂಪಾಂತರಿ ವೈರಸ್ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ.

ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಕೋವಿಡ್'ನ ಹೊಸ ಎವೈ4.2 ತಳಿ ವೈರಸ್ ರಾಜ್ಯದಲ್ಲಿ ಪತ್ತೆಯಾಗಿದೆಯಾದರೂ ಸೋಂಕು ಹರಡಿಲ್ಲ ಹಾಗೂ ಅದರ ಪರಿಣಾಮ ಹೇಗಿರುತ್ತದೆ ಎಂಬುದು ದೃಢಪಟ್ಟಿಲ್ಲ. ಹಾಗಾಗಿ ಈ ತಳಿ ಮೇಲೆ ತಜ್ಞರ ಸಮಿತಿಗಳು ನಿಗಾವಹಿಸುವಂತೆ ಕೇಂದ್ರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಹೊಸ ತಳಿ ಪತ್ತೆಗೆ ಪರೀಕ್ಷೆಗಳನ್ನು ಹೆಚ್ಚಿಸಲು ಚರ್ಚೆ ನಡೆದಿವೆ ಎಂದು ತಿಳಿದುಬಂದಿದೆ.

ರೂಪಾಂತರಿ ವೈರಸ್ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಇದೀಗ ಎಲ್ಲಾ ಸರ್ಕಾರಿ ಅಧಿಕಾರಿಗಳು, ಧಾರ್ಮಿಕ ನಾಯಕರು, ಮಠದ ಶ್ರೀಗಳು ಹಾಗೂ ಸ್ಥಳೀಯ ರಾಜಕೀಯ ನಾಯಕರು ಲಸಿಕೆ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿರುವ ಕೆಲಸಗಳನ್ನು ಮಾಡಬೇಕೆಂದು ರಾಜ್ಯ ಸರ್ಕಾರ ಹೇಳಿದೆ.

ಎರಡನೇ ಡೋಸ್ ಅನ್ನು ನೀಡುವುದರ ಕುರಿತು ಗಮನಹರಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊಬೈಲ್ ಲಸಿಕೆ ಘಟಕವನ್ನು ಈಗಾಗಲೇ ಆರಂಭಿಸಲಾಗಿದೆ. ಇದು 'ಹರ್ ಘರ್ ದಸ್ತಕ್' ಯೋಜನೆಯಾಗಿದೆ, ಜನನಿಬಿಡ ಪ್ರದೇಶಗಳ ಬಳಿ ಆಂಬ್ಯುಲೆನ್ಸ್ ಅನ್ನು ನಿಲ್ಲಿಸಿ, ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಯ ಬಾಗಿಲು ತಟ್ಟಿ ಜನರಿಗೆ ಲಸಿಕೆ ನೀಡುವ ಕೆಲಸ ಮಾಡಲಿದ್ದಾರೆ. ಇದನ್ನು ಆದ್ಯತೆಯ ಮೇಲೆ ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗುತ್ತದೆ ಮತ್ತು ಇದು ಸರಿಯಾದ ಕಾರ್ಯತಂತ್ರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ರಂದೀಪ್ ಡಿ ಅವರು ಹೇಳಿದ್ದಾರೆ.

ಶೇ.50ರಷ್ಟು ಜನರು 2ನೇ ಡೋಸ್ ಲಸಿಕೆ ಪಡೆದುಕೊಳ್ಳದೆ ಇರುವುದು, ಇನ್ನೂ ಕೆಲ ಜಿಲ್ಲೆಗಳಲ್ಲಿ ಸಾಕಷ್ಟು ಜನರು ಮೊದಲ ಡೋಸ್ ಲಸಿಕೆಯನ್ನೇ ಪಡೆದುಕೊಂಡಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ. ಲಸಿಕೆ ಕುರಿತ ತಪ್ಪು ಮಾಹಿತಿಗಳೂ ಇದಕ್ಕೆ ಕಾರಣವಾಗಿರಬಹುದು. ಲಸಿಕೆ ಹಿಂಜರಿಕೆಯನ್ನು ದೂರಾಗಿಸಲು ಸಾಮಾಜಿಕ, ಧಾರ್ಮಿಕ ಹಾಗೂ ಇತರೆ ಸಂಸ್ಥೆಗಳ ಮೊರೆ ಹೋಗಬೇಕಿದೆ. ಮೈಕ್ರೋ ಪ್ಲಾನಿಂಗ್ ಕೂಡ ಮುಖ್ಯವಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿಯ ತಜ್ಞರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕೂಡ ಎಸ್ಎಂಎಸ್ ಅಭಿಯಾನ ಆರಂಭಿಸಲು ಮುಂದಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ಲಸಿಕೆ ಪಡೆದುಕೊಳ್ಳಲು ಅರ್ಹರಿರುವ ವ್ಯಕ್ತಿಗಳ ಪಟ್ಟಿಯನ್ನು ಸಂಗ್ರಹಿಸುತ್ತಿದೆ ಎಂದು ತಿಳಿದುಬಂದಿದೆ.

ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಾರಗಳ ಕಾಲ ನಡೆಸಲಾಗುತ್ತಿರುವ ಕನ್ನಡಕ್ಕಾಗಿ ನಾವು ಕಾರ್ಯಕ್ರಮ ಕುರಿತು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಮಡಿಕೇರಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದ ಇಬ್ಬರು ವಿದ್ಯಾರ್ಥಿಗಳ ಮಾದರಿಗಳನ್ನು ಎವೈ4.2 ವಂಶವಾಹಿ ತಳಿ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಮಡಿಕೇರಿ ಶಾಲೆ ಸೇರಿದಂತೆ ಕ್ಲಸ್ಟರ್ ಝೋನ್ ಗಳಲ್ಲಿನ ಸ್ಯಾಂಪಲ್ ಗಳನ್ನು ರೂಪಾಂತರಿ ವೈರಸ್ ಪತ್ತೆ ಹಚ್ಚಲು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಕರ್ನಾಟದಲ್ಲಿ ಕೇವಲ 2 ಪ್ರಕರಣಗಳಷ್ಟೇ ಪತ್ತೆಯಾಗಿದ್ದ, ಆತಂಕ ಪಡುವ ಅಗತ್ಯವಿಲ್ಲ ಎಂದು ರಂದೀಪ್ ಅವರು ತಿಳಿಸಿದ್ದಾರೆ.

ನಿನ್ನೆ ನಡೆದ ಸಭೆಯಲ್ಲಿ ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬುದರ ಕುರಿತು ತಜ್ಞರು ಯಾವುದೇ ರೀತಿಯ ಮಾಹಿತಿಗಳನ್ನು ನೀಡಿಲ್ಲ. ಆದರೆ, ಹೆಚ್ಚೆಚ್ಚು ಜನರಿರುವ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಜನರು ನಿಯಂತ್ರಿಸಬೇಕು. ಕ್ಲಸ್ಟರ್ ಝೋನ್ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಲಸಿಕೆ ಪಡೆಯದವರು ಎರಡು ಡೋಸ್ ಲಸಿಕೆಗಳನ್ನು ಪಡೆದುಕೊಳ್ಳಬೇಕು. ಮೂರನೇ ಅಲೆ ಬರುವ ಯಾವುದೇ ಚಿನ್ಹೆಗಳು ಕಂಡು ಬರುತ್ತಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com