ಕೋರಮಂಗಲ ಆಡಿ ಕಾರು ದುರಂತ: ಭೀಕರ ಅಪಘಾತಕ್ಕೆ ಕಾರಣ ಶೋಧಿಸುತ್ತಿರುವ ಆರ್ ಟಿಒ ಅಧಿಕಾರಿಗಳು
ಕೋರಮಂಗಲದಲ್ಲಿ ಸಂಭವಿಸಿದ ಐಷಾರಾಮಿ ಕಾರು ಅಪಘಾತ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಆಡುಗೋಡಿ ಸಂಚಾರಿ ಪೊಲೀಸರು, ಮುಂದಿನ ಕ್ರಮಗಳಿಗಾಗಿ ವೈದ್ಯಕೀಯ ಪರೀಕ್ಷಾ ವರದಿಗಳಿಗಾಗಿ ಕಾದು ಕುಳಿತಿದ್ದಾರೆಂದು ತಿಳಿದುಬಂದಿದೆ.
Published: 02nd September 2021 11:29 AM | Last Updated: 02nd September 2021 11:36 AM | A+A A-

ಅಪಘಾತ ಸಂಭವಿಸಿದ ಸ್ಥಳ
ಬೆಂಗಳೂರು: ಕೋರಮಂಗಲದಲ್ಲಿ ಸಂಭವಿಸಿದ ಐಷಾರಾಮಿ ಕಾರು ಅಪಘಾತ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಆಡುಗೋಡಿ ಸಂಚಾರಿ ಪೊಲೀಸರು, ಮುಂದಿನ ಕ್ರಮಗಳಿಗಾಗಿ ವೈದ್ಯಕೀಯ ಪರೀಕ್ಷಾ ವರದಿಗಳಿಗಾಗಿ ಕಾದು ಕುಳಿತಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಆರ್'ಟಿಒ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಈ ವೇಳೆ ಅಪಘಾತಕ್ಕೀಡಾದ ಆಡಿ ಕ್ಯೂ3 ಎಸ್'ಯುವಿ ಕಾರನ್ನು ಪರಿಶೀಲನೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ತನಿಖೆ ಕೈಗೊಂಡಿರುವ ಪೊಲೀಸರು ಅಪಘಾತ ಸಂಭವಿಸಿದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದು, ದೃಶ್ಯಾವಳಿಗಳಲ್ಲಿ ಕಾರು ವೇಗವಾಗಿ ಸಾಗಿರುವುದು ಕಂಡು ಬಂದಿದೆ. ಚಾಲಕ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿದ್ದು, ಅಪಘಾತಕ್ಕೂ ಕೆಲವೇ ನಿಮಿಷಗಳ ಮುನ್ನ ಸೋನಿ ವರ್ಲ್ಡ್ ಜಂಕ್ಷನ್ ಬಳಿ ಫುಡ್ ಡೆಲಿವರಿ ಬಾಯ್ ಒಬ್ಬ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿರುವುದು ಕಂಡು ಬಂದಿದೆ.
ಕಾರಿನಲ್ಲಿದ್ದವರು ಅಪಘಾತಕ್ಕೂ ಮುನ್ನ ಎಲ್ಲೆಲ್ಲಿ ಭೇಟಿ ನೀಡಿದ್ದರು ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ. ಅಪಘಾತಕ್ಕೂ ಮುನ್ನ ಕೋರಮಂಗಲದಲ್ಲಿ 1 ಗಂಟೆಗಳ ಕಾಲ ಕಾರು ಚಲಾಯಿಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅದಷ್ಟೇ ಅಲ್ಲದೆ, ಅಪಘಾತಕ್ಕೆ ಕಾರಣವೇನು, ಕಾರಿನ ಬ್ರೇಕ್ ಫೇಲ್ ಆಗಿತ್ತೇ? ಅಥವಾ ಬೇಜವಾಬ್ದಾರಿತನದಿಂದ ಕಾರು ಚಲಾಯಿಸಿರುವುದು ಕಾರಣವಾಯಿತೇ ಎಂಬುದರ ಕುರಿತಂತೆಯೂ ತನಿಖೆ ನಡೆಸಲಾಗುತ್ತಿದೆ. ಕಾರು ತಯಾರಿಕಾ ಕಂಪನಿಯಿಂದಲೂ ಕೆಲ ಮಾಹಿತಿಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.