ಸ್ಥಿರಾಸ್ತಿ ಮಾರ್ಗಸೂಚಿ ದರ ಇಳಿಕೆಗೆ ಸರ್ಕಾರ ಚಿಂತನೆ: ಸಚಿವ ಆರ್. ಅಶೋಕ್

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ರಾಜ್ಯಾದ್ಯಂತ `ಸ್ಥಿರಾಸ್ತಿ ಮಾರ್ಗಸೂಚಿ ದರ' ಇಳಿಕೆಗೆ ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಶುಕ್ರವಾರ ಹೇಳಿದ್ದಾರೆ. 
ಸಚಿವ ಆರ್.ಅಶೋಕ್
ಸಚಿವ ಆರ್.ಅಶೋಕ್

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ರಾಜ್ಯಾದ್ಯಂತ 'ಸ್ಥಿರಾಸ್ತಿ ಮಾರ್ಗಸೂಚಿ ದರ' ಇಳಿಕೆಗೆ ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಶುಕ್ರವಾರ ಹೇಳಿದ್ದಾರೆ. 

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿ ಕುಸಿದಿದೆ. ಹೀಗಾಗಿ ಹೆಚ್ಚಿನವರು ಜಿಪಿಎ ಪತ್ರಗಳನ್ನು ನೋಂದಣಿ ಮಾಡುತ್ತಿದ್ದಾರೆ. ಆದುದರಿಂದ ಅದನ್ನು ತಪ್ಪಿಸಲು ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿ, ಅಗತ್ಯ ಸ್ಥಳಗಳಲ್ಲಿ ಕಡಿಮೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪಕ್ಕದ ಆಸ್ತಿಗಳ ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಿಸಲಾಗುವುದು. ಉಳಿದಂತೆ ನಿವೇಶನ ಮತ್ತು ಮನೆ ಖರೀದಿಗೆ ಮಾರ್ಗಸೂಚಿ ದರವನ್ನು ಇಳಿಕೆ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಅಧ್ಯಯನ ನಡೆಸಿ, ಡಿಸೆಂಬರ್ ಒಳಗಾಗಿ ದರ ಪರಿಷ್ಕರಣೆಗೆ ಸೂಚಿಸಲಾಗಿದೆ. ಜನರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು  ಕ್ರಮ ಕೈಗೊಳ್ಳಲಾಗುತ್ತಿದೆ. 

ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ: `ರಾಜ್ಯದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರಕಾರದ ಅಧಿಕಾರಿಗಳ ತಂಡ ನಾಳೆ (ಸೆ.4) ರಾಜ್ಯಕ್ಕೆ ಆಗಮಿಸಲಿದ್ದು, ಸೆ.7ರ ವರೆಗೆ ಒಟ್ಟು 4 ದಿನಗಳ ಕಾಲ ರಾಜ್ಯದ ವಿವಿಧ ತಾಲೂಕುಗಳಲ್ಲಿ ಪ್ರವಾಸ ನಡೆಸಲಿದ್ದು, ಕೃಷಿ, ತೋಟಗಾರಿಕಾ ಬೆಳೆಗಳು ಸೇರಿದಂತೆ ಅತಿವೃಷ್ಟಿಯ ಹಾನಿ ಬಗ್ಗೆ ಅಧ್ಯಯನ ನಡೆಸಲಿದೆ ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿನ ಮಳೆ-ಪ್ರವಾಹದಿಂದ ಒಟ್ಟು ರೂ. 5,690 ಕೋಟಿ ಮೊತ್ತದ ಹಾನಿಯಾಗಿದೆ ಎಂದು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ರಾಜ್ಯಕ್ಕೆ ರೂ.765 ಕೋಟಿ ಪರಿಹಾರ ದೊರೆಯಬೇಕಿದೆ. ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸುವುದರಿಂದ ನಷ್ಟಕ್ಕೆ ಒಳಗಾಗಿರುವವರು ಸೇರಿದಂತೆ ರಾಜ್ಯಕ್ಕೆ ಪರಿಹಾರ ದೊರಕಲು ಅನುಕೂಲವಾಗಲಿದೆ ಎಂದಿದ್ದಾರೆ. 

ರಾಜ್ಯದಲ್ಲಿ ಭೂಮಾಪಕರ ಕೊರತೆ ಇರುವುದರಿಂದ ಸ್ಥಿರಾಸ್ತಿಗಳ ಭೂಮಾಪನ, ಪೋಡಿ ಪ್ರಕ್ರಿಯೆಗೆ ತೊಂದರೆ ಆಗಿದೆ. ರಾಜ್ಯದಲ್ಲಿ ಒಟ್ಟು 2 ಲಕ್ಷ ಅರ್ಜಿಗಳು ಬಾಕಿ ಇವೆ. ಅವುಗಳ ತ್ವರಿತ ವಿಲೇವಾರಿಗಾಗಿ ಹೆಚ್ಚಿನ ಸಂಖ್ಯೆಯ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದೀಗ 820 ಭೂಮಾಪಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. 

8-10 ತಿಂಗಳ ಅವಧಿಯಲ್ಲಿ ಭೂಮಾಪಕರ ಸಮಸ್ಯೆಯಿಂದ ಬಹುತೇಕ ಅರ್ಜಿಗಳು ಬಾಕಿ ಉಳಿದಿವೆ. ಡಿಸೆಂಬರ್ ಅಂತ್ಯದೊಳಗೆ ಇನ್ನೂ 600 ಮಂದಿ ಪರವಾನಗೆ ಪಡೆದ ಭೂಮಾಪಕರ ನೇಮಕಾತಿ ಪೂರ್ಣಗೊಳ್ಳಲಿದೆ. ಹೊಸದಾಗಿ ನೇಮಕಗೊಂಡ ಭೂಮಾಪಕರನ್ನು ಹೆಚ್ಚು ಅರ್ಜಿಗಳು ಬಾಕಿ ಇರುವ ಸ್ಥಳಗಳಿಗೆ ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com