ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಬ್ಬದ ಸಂತಸದ ನಡುವೆಯೇ ಜವರಾಯ ಅಟ್ಟಹಾಸ; ಹಾಸನ, ದಾವಣಗೆರೆ, ಕಲಬುರಗಿಯಲ್ಲಿ ಅಪಘಾತ, 8 ಮಂದಿ ಸಾವು

ಗಣೇಶ ಚತುರ್ಥಿ ಹಬ್ಬದ ಸಂತಸದ ನಡುವೆಯೇ ಕರ್ನಾಟಕದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು, ಮೂರು ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ 8 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.
Published on

ಹಾಸನ: ಗಣೇಶ ಚತುರ್ಥಿ ಹಬ್ಬದ ಸಂತಸದ ನಡುವೆಯೇ ಕರ್ನಾಟಕದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು, ಮೂರು ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ 8 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಹಾಸನ, ದಾವಣಗೆರೆ, ಕಲಬುರಗಿಯಲ್ಲಿ ನಡೆದ ವಿವಿಧ ರಸ್ತೆ ಅಪಘಾತಗಳಲ್ಲಿ ಮಗು ಸೇರಿದಂತೆ 8 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. 

ಅಕ್ಕನಿಗೆ ಬಾಗಿನ ಕೊಟ್ಟು ತವರಿಗೆ ಕರೆದೊಯ್ಯುತ್ತಿದ್ದ ಬಿಎಸ್ಎಫ್ ಯೋಧ, ಮಗು ಸಾವು
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿಲುವಾಗಿಲು ಬಳಿ ನಡೆದ ಅಪಘಾತದಲ್ಲಿ ಗೌರಿ ಹಬ್ಬಕ್ಕೆ ಅಕ್ಕನ ಕರೆದೊಯ್ಯಲು ಬಂದ ಬಿಎಸ್ಎಫ್ ಯೋಧ ಹಾಗೂ ಅಕ್ಕನ ಮಗು ಕೊನೆಯುಸಿರೆಳೆದಿದ್ದಾರೆ. ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದಾರೆ. ಮೈಸೂರು  ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಲಾಳನಪುರದ ಶಂಕರ್ ಹಾಗು ಅರಕಲಗೂಡಿನ ಮಗು ಮೃತಪಟ್ಟವರು. ಗೌರಿ ಗಣೇಶ ಹಬ್ಬಕ್ಕಾಗಿ ಅಕ್ಕನಿಗೆ ಬಾಗಿನ ಕೊಟ್ಟು ಹಬ್ಬಕ್ಕೆ ಕರೆದೊಯ್ಯುತ್ತಿದ್ದ ತಮ್ಮ ಹಬ್ಬಕ್ಕೆಂದು ರಜೆ ಮೇಲೆ ಊರಿಗೆ ಬಂದಿದ್ದ ಬಿ.ಎಸ್.ಎಫ್ ಯೋಧ. ಮಧು ಮತ್ತು ಪತ್ನಿ ಚೈತ್ರಾಗೆ ಗಂಭೀರ  ಗಾಯಗಳಾಗಿವೆ. ಗಾಯಾಳುಗಳಿಗೆ ಅರಕಲಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಲಬುರಗಿ: ಬೈಕ್​​ಗಳ ಮುಖಾಮುಖಿ ಡಿಕ್ಕಿ, ಮೂವರ ಸಾವು
ಇತ್ತ ಕಲಬುರಗಿಯಲ್ಲಿ ಸಂಭವಿಸಿದ ಮತ್ತೊಂದು ದುರಂತದಲ್ಲಿ 2 ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿದ್ದು ಮೂವರು ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಮಡಕಿ ತಾಂಡಾ ಬಳಿ ಸಂಭವಿಸಿದ ಅಪಘಾತದಲ್ಲಿ ಅಂಬರೀಶ್, ಅನಿಲ್ ಗುತ್ತೇದಾರ್ ಮತ್ತು ನಾಗೇಶ್ ದುರ್ಮರಣಕ್ಕೀಡಾಗಿದ್ದಾರೆ.  ಮತ್ತೊಬ್ಬ ಯುವಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗಣೇಶೋತ್ಸವಕ್ಕೆ ಅನುಮತಿ ಕೇಳಲು ಬಂದವರು, ಪರಲೋಕಕ್ಕೆ ಪಯಣ
ಇತ್ತ ದಾವಣಗೆರೆಯಲ್ಲಿ ನಡೆದ ಮತ್ತೊಂದು ದುರಂತದಲ್ಲಿ ಬೊಲೆರೊ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೇಭಾಗಿ ಬಳಿ ಸಂಭವಿಸಿರುವ ಭೀಕರ ಅಪಘಾತ ಇದಾಗಿದೆ. ಬೈಕ್‌ನಲ್ಲಿದ್ದ ಮಲ್ಲೇಶಪುರ ಗ್ರಾಮದ ಮಂಜುನಾಥ್(17 ವರ್ಷ),  ಅಜ್ಜಯ್ಯ(18 ವರ್ಷ) ಮತ್ತು ದೇವರಾಜ್(17 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ. ಇಬ್ಬರು ಯುವಕರು ಅಪಘಾತ ನಡೆದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮತ್ತೊಬ್ಬ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ. ಮೃತ ಯುವಕರು ಚನ್ನಗಿರಿ ತಾಲ್ಲೂಕ್ ಮಲ್ಲೇಶಪುರ ನಿವಾಸಿಗಳಾಗಿದ್ದು,  ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com