ಬೆಂಗಳೂರು: ನಕಲಿ ಗನ್ ತೋರಿಸಿ ರೈಲಿನಲ್ಲೇ ಮಹಿಳೆಯನ್ನು ದೋಚಿದ್ದ ಆರೋಪಿ ಬಂಧನ

ನಕಲಿ ಪಿಸ್ತೂಲ್ ಗಳನ್ನು ತೋರಿಸಿ ರೈಲಿನಲ್ಲೇ ಪ್ರಯಾಣಿಕ ಮಹಿಳೆಯನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರ ಗ್ಯಾಂಗ್ ನಿಂದ ಚಿನ್ನಾಭರಣ ಮತ್ತು ಗನ್ ವಶ
ಕಳ್ಳರ ಗ್ಯಾಂಗ್ ನಿಂದ ಚಿನ್ನಾಭರಣ ಮತ್ತು ಗನ್ ವಶ

ಬೆಂಗಳೂರು: ನಕಲಿ ಪಿಸ್ತೂಲ್ ಗಳನ್ನು ತೋರಿಸಿ ರೈಲಿನಲ್ಲೇ ಪ್ರಯಾಣಿಕ ಮಹಿಳೆಯನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಶೇಷಾಂದ್ರಿಪುರಂ ಬಳಿ ಈ ಘಟನೆ ನಡೆದಿದ್ದು, ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಜಾಗವಿಲ್ಲದಿದ್ದಾಗ, ತುಮಕೂರು ಕಡೆಯಿಂದ ಬರುವ ರೈಲುಗಳನ್ನು ಶೇಷಾದ್ರಿಪುರ ಬಳಿ ಕೆಲ ನಿಮಿಷ ನಿಲ್ಲಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಬೋಗಿ ಏರುತ್ತಿದ್ದ ಆರೋಪಿಗಳು,  ಒಂಟಿಯಾಗಿದ್ದವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಘಟನೆ ಸಂಬಂಧ ಇದೀಗ ಬಿಹಾರದ ರವಿ ಸಿಂಗ್ (27 ವರ್ಷ) ಹಾಗೂ ಉತ್ತರ ಪ್ರದೇಶದ ಸಂದೀಪ್ ಅಲಿಯಾಸ್ ರಜಪೂತ್ ಸಿಂಗ್ (32 ವರ್ಷ) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ ಸುಮಾರು 3 ಲಕ್ಷ ರೂ ಮೌಲ್ಯದ  ಚಿನ್ನಾಭರಣ ಹಾಗೂ ನಕಲಿ ಪಿಸ್ತೂಲ್ ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಬೆಂಗಳೂರು ರೈಲ್ವೆ ಪೊಲೀಸರು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ಬಾರ್, ಗ್ಯಾರೇಜ್ ಹಾಗೂ ಇತರೆಡೆ ಕೆಲಸ ಮಾಡುತ್ತಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ ಆರೋಪಿಗಳು, ಸುಲಿಗೆ ಮಾಡಲು ಸಂಚು ರೂಪಿಸಿದ್ದರು. ಅದಕ್ಕಾಗಿ ನಕಲಿ ಪಿಸ್ತೂಲ್ ಗಳನ್ನು ಕೂಡ ಖರೀದಿಸಿದ್ದರು.ಆ. 22, 25 ಹಾಗೂ 30ರಂದು  ಆರೋಪಿಗಳು ಕೃತ್ಯ ಎಸಗಿದ್ದರು. ಈ ಬಗ್ಗೆ ಪ್ರಕರಣಗಳೂ ದಾಖಲಾಗಿದ್ದವು. ತನಿಖೆ ಕೈಗೊಂಡಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದೂ ಹೇಳಿದರು.

ಬೋಗಿಯಲ್ಲಿ ಇರುತ್ತಿದ್ದ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಮಹಿಳೆಯರ ಹಣೆಗೆ ನಕಲಿ ಪಿಸ್ತೂಲ್ ಹಿಡಿದು, 10 ಎಣಿಸುವ ಮುಂಚೆ ಚಿನ್ನಾಭರಣ ಹಾಗೂ ನಗದು ನೀಡುವಂತೆ ಒತ್ತಾಯಿಸುತ್ತಿದ್ದರು. ಜೀವಭಯದಿಂದ ಮಹಿಳೆಯರು, ಚಿನ್ನಾಭರಣ ಬಿಚ್ಚಿ ಕೊಡುತ್ತಿದ್ದರು.  ವಿರೋಧ ವ್ಯಕ್ತಪಡಿಸಿದರೆ, ಆರೋಪಿಗಳೇ ಚಿನ್ನಾಭರಣ ಕಿತ್ತುಕೊಳ್ಳುತ್ತಿದ್ದರು. ನಾವು ಆರೋಪಿಗಳ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಪೊಲೀಸರು ಹೇಳಿದರು.


ಈ ದರೋಡೆ ಜೋಡಿ ಬಂಧನದೊಂದಿಗೆ ಮಹಿಳೆಯರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com