ಎರಡು ದಿನಕ್ಕಿಂತ ಹೆಚ್ಚು ಕೊರೋನಾ ಸೋಂಕು ಲಕ್ಷಣವಿರುವ ಮಕ್ಕಳಿಗೆ ಕೋವಿಡ್ ಪರೀಕ್ಷೆ: ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ಕೋವಿಡ್‌ ಸೋಂಕಿನ ಗುಣಲಕ್ಷಣಗಳು ಕಂಡುಬಂದಲ್ಲಿ ಅಂತಹವರಿಗೆ ಕೋವಿಡ್  ಪರೀಕ್ಷೆ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಮುಕ್ತ ಆಯುಕ್ತ ಗೌರವ್‌ ಗುಪ್ತ ಸೂಚಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ಕೋವಿಡ್‌ ಸೋಂಕಿನ ಗುಣಲಕ್ಷಣಗಳು ಕಂಡುಬಂದಲ್ಲಿ ಅಂತಹವರಿಗೆ ಕೋವಿಡ್ ಪರೀಕ್ಷೆ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಮುಕ್ತ ಆಯುಕ್ತ ಗೌರವ್‌ ಗುಪ್ತ ಸೂಚಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಕ್ರಮಗಳ ಕುರಿತು ಮಕ್ಕಳ ತಜ್ಞರ ಸಮಿತಿ ಹಾಗೂ ತಾಂತ್ರಿಕ ತಜ್ಞರ ಸಮಿತಿ ಜೊತೆ ಸಭೆ ನಡೆಸಿದ ಅವರು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಎಲ್ಲಾ ಶಾಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿದರು.

ನೋಡಲ್ ಅಧಿಕಾರಿಗಳು ಶಾಲಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿ ಜೊತೆ ಕೆಲಸ ಮಾಡಬೇಕು. ಮಕ್ಕಳಲ್ಲಿ 2 ದಿನಕ್ಕಿಂತ ಹೆಚ್ಚು ದಿನಗಳ ಕಾಲ ಸೋಂಕು ಲಕ್ಷಣ ಕಂಡುಬಂದರೆ ಅವರು ಶಾಲೆಗೆ ಬಾರದಂತೆ ತಿಳಿಸಬೇಕು. ಸೋಂಕು ಲಕ್ಷಣವಿರುವ ಮಕ್ಕಳ ಮಾಹಿತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದರೆ ಅಂತಹ ಮಕ್ಕಳ ಮನೆಗೆ ವೈದ್ಯಾಧಿಕಾರಿ ತಂಡವು ತೆರಳಿ ಪರೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದರು.

ಈ ಸಭೆಯಲ್ಲಿ ನಗರದಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಬಾರದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಮಕ್ಕಳಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ನಗರದಲ್ಲಿ ಮಕ್ಕಳಲ್ಲಿ ಹೆಚ್ಚು ಕೋವಿಡ್ ಸೊಂಕು ಕಂಡುಬರುತ್ತಿಲ್ಲ. 0 ರಿಂದ 12 ವರ್ಷದ ಮಕ್ಕಳಿಗೆ ಶೇ. 7.21 ಹಾಗೂ 13 ರಿಂದ 18 ವರ್ಷದ ಮಕ್ಕಳಿಗೆ ಶೇ. 8.21 ಸೋಂಕು ಕಂಡುಬರುತ್ತಿದೆ. ಮಕ್ಕಳಿಗೆ ಈ ಕಾಲದಲ್ಲಿ ಸಾಮಾನ್ಯವಾಗಿ ಜ್ವರ, ನೆಗಡಿ, ಕೆಮ್ಮು ರೀತಿಯ ಲಕ್ಷಣಗಳು ಕಂಡುಬಂದು ಒಂದು ವಾರದೊಳಗಾಗಿ ಗುಣಮುಖರಾಗುತ್ತಾರೆ ಎಂದು ಹೇಳಿದರು.

ತಾಂತ್ರಿಕ ತಜ್ಞರ ಸಮಿತಿ ಜೊತೆ ಸಭೆ:
ತಾಂತ್ರಿಕ ತಜ್ಞರ ಸಮಿತಿ ಜೊತೆ ನಡೆದ ಸಭೆಯಲ್ಲಿ ಸೀರೋ ಸಮೀಕ್ಷೆ ಹಾಗೂ ಜಿನೋಮ್ ಸೀಕ್ವೆನ್ಸ್ ಸಂಬಂಧಿಸಿದಂತೆ ಚರ್ಚಿಸಲಾಯಿತು. ಈ ಸಂಬಂಧ ಸೆರೋ ಸಮೀಕ್ಷೆ ಮಾಡಿರುವ ಸಂಬಂಧ ಇನ್ನೂ ವಿವರವಾದ ಮಾಹಿತಿ ನೀಡಲು ಸಮಿತಿಯಲ್ಲಿರುವ ತಜ್ಞರು ತಿಳಿಸಿದ್ದು, ವಿವರವಾದ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಅವರರು ತಿಳಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ಡಾ. ವಿಜೇಂದ್ರ, ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ನಿರ್ಮಲ ಬುಗ್ಗಿ, ಮಕ್ಕಳ ತಜ್ಞರ ಸಮಿತಿ ಹಾಗೂ ತಾಂತ್ರಿಕ ತಜ್ಞರ ಸದಸ್ಯರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com