ಕೋವಿಡ್ ಆತಂಕ: ಅರಮನೆ ಆವರಣದೊಳಗೇ ದಸರಾ ಆನೆಗಳ ನಡಿಗೆ ತಾಲೀಮು ಆರಂಭ!
ಕೊರೋನಾ 3ನೇ ಆತಂಕದ ನಡುವೆಯೇ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ದಸರಾ ಗಜಪಡೆಯ ಮೈಸೂರು ಅರಮನೆ ಆವರಣದೊಳಗೆ ಭಾನುವಾರ ಬೆಳಿಗ್ಗೆ ನಡಿಗೆ ತಾಲೀಮು ಆರಂಭಿಸಿದವು.
Published: 20th September 2021 07:51 AM | Last Updated: 20th September 2021 01:21 PM | A+A A-

ಅರಮನೆ ಆವರಣದಲ್ಲಿ ನಡಿಗೆ ತಾಲೀಮು ನಡೆಸುತ್ತಿರುವ ಆನೆಗಳು.
ಮೈಸೂರು: ಕೊರೋನಾ 3ನೇ ಆತಂಕದ ನಡುವೆಯೇ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ದಸರಾ ಗಜಪಡೆಯ ಮೈಸೂರು ಅರಮನೆ ಆವರಣದೊಳಗೆ ಭಾನುವಾರ ಬೆಳಿಗ್ಗೆ ನಡಿಗೆ ತಾಲೀಮು ಆರಂಭಿಸಿದವು.
ಅರಮನೆ ಆನೆ ಬಿಡಾರದಿಂದ ಆರಂಭವಾದ ನಡಿಗೆ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ವಿಕ್ರಮ, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ, ಕಾವೇರಿ, ಚೈತ್ರ ಮತ್ತು ಲಕ್ಷ್ಮೀ ಆನೆಗಳು ಪಾಲ್ಗೊಂಡಿದ್ದವು.
ಕೋವಿಡ್ ಆತಂಕ ಹಿನ್ನೆಲೆಯಲ್ಲಿ ಅರಮನೆ ಒಳಾವರಣದಲ್ಲೇ ಎರಡು ಸುತ್ತು ನಡಿಗೆ ತಾಲೀಮು ನಡೆಯಿತು. ತಾಲೀಮು ಬಳಿಕ ಆನೆಗಳಿಗೆ ಮಾವುತರು, ಕವಾಡಿಗರು ಜಳಕ ಮಾಡಿಸಿ ಆಹಾರ ನೀಡಿ ಆರೈಕೆ ಮಾಡಿದರು.
ದಸರಾ ಆನೆಗಳಿಗೆ ಸೆ.20ರಿಂದ ಮರಳು ಮೂಟೆ ಹೊರಿಸುವ ತಾಲೀಮು ಆರಂಭವಾಗಲಿದ್ದು, ಬೆಳಿಗ್ಗೆ 11.30ಕ್ಕೆ ಅರಮನೆ ಆವರಣದಲ್ಲಿ ಮೊದಲು ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಮಧ್ಯಾಹ್ನ 12.10ಕ್ಕೆ ತಾಲೀಮು ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ದಸರಾ ಆನೆಗಳನ್ನು ನೋಡಲು ಪ್ರವಾಸಿಗರು, ಸಾರ್ವಜನಿಕರು ಮುಗಿ ಬೀಳುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಆನೆ ಬಿಡಾರದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಸೂಚನಾ ಪಟ್ಟಿಯನ್ನು ದಾಟಿ ಆನೆಗಳ ಬಳಿ ಪ್ರವೇಶಿಸುವಂತಿಲ್ಲ. ಆನೆಗಳಿಗೆ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ನಿಶ್ಯಬ್ಧತೆ ಹಾಗೂ ಸ್ವಚ್ಛತೆಯನ್ನು ಕಾಪಾಡತಕ್ಕದ್ದು ಎಂದು ತಿಳಿಸಿದ್ದಾರೆ.