ಬೆಂಗಳೂರು: ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಕರಣವನ್ನು ಮುಚ್ಚಿ ಹಾಕುವ ಯಾವುದೇ ಪ್ರಯತ್ನ ಮಾಡಲು ಸಾಧ್ಯವಿಲ್ಲ. ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಪೊಲೀಸರ ನಡೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥಿಸಿಕೊಂಡರು. ಪ್ರಕರಣವನ್ನು ಮುಚ್ಚಿ ಹಾಕುವ ಯಾವುದೇ ಪ್ರಯತ್ನ ಮಾಡಲು ಸಾಧ್ಯವಿಲ್ಲ. ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ಆಗುವಂತೆ ಮಾಡುತ್ತೇವೆ: ಸಿಎಂ ಬೊಮ್ಮಾಯಿ
ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸದಸ್ಯರ ಆರೋಪಕ್ಕೆ ಉತ್ತರಿಸಿದ ಅವರು, 'ಮನುಷ್ಯನಲ್ಲಿ ಇರುವ ರಾಕ್ಷಸೀ ಗುಣ ಉದ್ದೀಪನಗೊಂಡಾಗ ಇಂತಹ ಘಟನೆ ನಡೆದು ಬಿಡುತ್ತದೆ. ಸರ್ಕಾರ ಆ ಸಂದರ್ಭದಲ್ಲಿ ಏನು ಮಾಡಿದೆ ಎಂದು ಕೇಳಿದರೆ ನಿರುತ್ತರರಾಗುತ್ತೇವೆ. ಇಂತಹ ನೀಚ ಕೆಲಸ ಮಾಡಿದವರಿಗೆ ಸದನದಿಂದ ಒಂದು ಸಂದೇಶ ಹೋಗಬೇಕು. ಗಂಡು ಮಕ್ಕಳು ಕೂಡಾ ತಾಯಿಯ ಮಕ್ಕಳು . ಯಾರು ಈ ಕೆಲಸವನ್ನು ಸರಿ ಎಂದು ಹೇಳಲ್ಲ ಎಂದರು.
ಅಂತೆಯೇ ಅಪ್ಪನನ್ನು ವ್ಯಭಿಚಾರಿ ಎಂದರೆ ಕೋಪ ಬರಲ್ಲ, ತಾಯಿಯನ್ನು ಹಾಗಂದರೆ ನಾವು ಸಹಿಸೋದಿಲ್ಲ. ಹೆಣ್ಣಿನ ಶೀಲದ ಬಗ್ಗೆ ಪಾವಿತ್ರ್ಯತೆಯ ಭಾವನೆ ಇದೆ. ಈ ಮಾನಸಿಕತೆಯಿಂದ ನಾವು ಎಚ್ಚರಿಕೆಯಿಂದ ಇರಿ ಎಂದು ಹೆಣ್ಣುಮಕ್ಕಳಿಗೆ ಹೇಳುತ್ತೇವೆ. ಅಂತಹ ಸಂದರ್ಭದಲ್ಲಿ ಇಂತಹ ಉದ್ಘಾರ ಬರುತ್ತದೆ ಎಂದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.
ಈ ಪ್ರಕರಣದಲ್ಲಿ ಪೊಲೀಸರು ವಿಶೇಷ ಆಸಕ್ತಿ ವಹಿಸಿಕೊಂಡು ಬೇರೆ ಬೇರೆ ಸಾಕ್ಷಾಧಾರಗಳ ಆಧರಿಸಿ ಕ್ರಮ ಕೈಗೊಂಡಿದ್ದಾರೆ. ಯುವಕನ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡು ಅದರ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಮೈಸೂರಿನಲ್ಲಿ ನಾನು ಹೋದ ರಾತ್ರಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇನೆ. ಬೆಳಗ್ಗೆ 6.30ಕ್ಕೆ ಅಧಿಕಾರಿಗಳ ಜೊತೆ ಮತ್ತೊಂದು ಸಭೆ ನಡೆಸಿದ್ದೇನೆ. ಬಳಿಕ ದೇವರ ಆಶೀರ್ವಾದ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಹೋದೆ. ಪೊಲೀಸ್ ಇಲಾಖೆಯಲ್ಲಿ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮ ಇತ್ತು. ಆ ಕಾರಣಕ್ಕಾಗಿ ಭಾಗಿಯಾದೆ. ಪಿಸ್ತೂಲ್ ಕೊಟ್ಟು ಫೈರ್ ಮಾಡಿ ಎಂದು ಪೊಲೀಸರು ಕೊಟ್ಟರು. ಆ ಕಾರಣಕ್ಕಾಗಿ ಫೈರ್ ಮಾಡಿದೆ. ಯಾವುದೇ ಫೋಸ್ ಕೊಡುವ ಉದ್ದೇಶ ಇರಲಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಮಾರ್ಧನಿಸಿದ ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಸರ್ಕಾರವಾಗಲೀ, ಪೊಲೀಸರಾಗಲಿ ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದ ಸಿದ್ದರಾಮಯ್ಯ
ಇದೇ ವೇಳೆ ಮೈಸೂರಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಮಾತನಾಡಿದ ಅವರು, 'ಮೈಸೂರಿನಲ್ಲಿ ಪೊಲೀಸರ ಸಂಖ್ಯೆ 1 ಲಕ್ಷಕ್ಕೆ 317 ಇದೆ. ಹೊಯ್ಸಳ ಇಪ್ಪತ್ತು ಹಾಗೂ ಪೆಟ್ರೋಲಿಂಗ್ ವಾಹನ 20 ಇವೆ. ರಾತ್ರಿ 250 ಮಂದಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ ಎಂದು ಗೃಹ ಸಚಿವರು ಸದನಕ್ಕೆ ಮಾಹಿತಿ ಕೊಟ್ಟರು.
ಅತ್ಯಾಚಾರ ಪ್ರಕರಣಗಳ ಅಂಕಿ ಅಂಶಗಳನ್ನು ಕೊಟ್ಟ ಸಚಿವರು, 2013 ರಲ್ಲಿ 13, 2014 - 23, 2015-18, 2016- 14, 2017- 13, 2018- 16, 2019- 14, 2020- 15 ಹಾಗೂ 2021 ರಲ್ಲಿ 5 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಸದನಕ್ಕೆ ವಿವರ ನೀಡಿದರು.
ಶೀಘ್ರ ವಿಚಾರಣೆಗೆ ಕೋರ್ಟ್ ಗೆ ಮನವಿ
ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವಿನಂತಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಲ್ಲಿ ಮಾತನಾಡಲು ಹೇಳಿದ್ದೇನೆ. ಸರ್ಕಾರದ ಕಡೆಯಿಂದ ವಿಶೇಷ ಅಭಿಯೋಜಕರ ನೇಮಕ ಮಾಡಿ ಈ ಕೇಸ್ ಗೆಲ್ಲಬೇಕು. ಅವರಿಗೆ ಖಾಯಂ ಶಿಕ್ಷೆ ಆಗಬೇಕು. ಇದು ಸರ್ಕಾರದ ಇರಾದೆ ಯಾಗಿದೆ ಎಂದು ಗೃಹ ಸಚಿವರು ತಿಳಿಸಿದರು.