ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡಿಕೆ ಆರಂಭಿಸಿದ ಸರ್ಕಾರ

ಕೋವಿಡ್-19 ಸೋಂಕಿನಿಂದ ಕುಟುಂಬದ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಆಸರೆ ನೀಡುವ ವಿಶೇಷ ಪರಿಹಾರ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಇಂದು ಅಧಿಕೃತವಾಗಿ ಚಾಲನೆ ನೀಡಿದೆ.
ಪರಿಹಾರ ನೀಡಿದ ಆರ್ ಅಶೋಕ್
ಪರಿಹಾರ ನೀಡಿದ ಆರ್ ಅಶೋಕ್

ಬೆಂಗಳೂರು: ಕೋವಿಡ್-19 ಸೋಂಕಿನಿಂದ ಕುಟುಂಬದ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಆಸರೆ ನೀಡುವ ವಿಶೇಷ ಪರಿಹಾರ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಇಂದು ಅಧಿಕೃತವಾಗಿ ಚಾಲನೆ ನೀಡಿದೆ.

ಇಂದಿನಿಂದ ಪರಿಹಾರ ನೀಡುವ ಕಾರ್ಯ ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಆರ್.‌ಅಶೋಕ್ ಹೇಳಿದರು. ಅವರಿಂದು ವಿಧಾನಸೌಧದ ಮೂರನೇ ಮಹಡಿಯ ಸಮಿತಿ ಸಭಾಂಗಣದಲ್ಲಿ ಸಂತ್ರಸ್ತರಿಗೆ ರೂ.1.00 ಲಕ್ಷ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು. ಈಗಾಗಲೇ ಪರಿಹಾರ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿದೆ.ಅದರಂತೆ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿದೆ ಎಂದು ವಿವರಿಸಿದರು. ಈ ಯೋಜನೆಯಲ್ಲಿ ಅರ್ಜಿ ಸ್ವೀಕೃತಿ/ಸಂಸ್ಕರಣೆ ಹಾಗೂ ಪರಿಹಾರ ವಿತರಣೆಗಾಗಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದಲ್ಲದೆ ಎಲ್ಲ ನಾಡಕಛೇರಿ/ ಬಾಪೂಜಿ ಸೇವಾ ಕೇಂದ್ರ/ ಕರ್ನಾಟಕ-1/ ಬೆಂಗಳೂರು ಮತ್ತು ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಅರ್ಜಿ ಸ್ವೀಕೃತಿಗೆ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಕೋವಿಡ್ ಪರಿಹಾರ ಕುರಿತಂತೆ ಆಕ್ಷೇಪಣೆ ಹಾಗೂ ಕುಂದು ಕೋರತೆಗಳ ನಿವಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಶಿಫಾರಸ್ಸು ಮಾಡಿರುವಂತೆ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರೂ.50,000/- ಪರಿಹಾರಧನವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಧಿಯಿಂದ ಭರಿಸಲು ಹೇಳಲಾಗಿದೆ. ಈ ದಿಶೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ನಿರೀಕ್ಷಿಸಲಾಗಿದೆ.

ಆದಾಗ್ಯೂ, ರಾಜ್ಯದಲ್ಲಿ ಇದುವರೆವಿಗೆ ಕೋವಿಡ್‌ನಿಂದ ಮೃತ ಹೊಂದಿರುವ 37668 ಪ್ರಕರಣಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ದುಡಿಯುವ ವ್ಯಕ್ತಿಯು ಮರಣ ಸಂದರ್ಭದಲ್ಲಿ ಕುಟುಂಬದ ಕಾನೂನು ರೀತ್ಯ ವಾರಸುದಾರರಿಗೆ ರೂ.1.00 ಲಕ್ಷ ವಿತರಿಸಲು ರೂ ೩೦೦.೦೦ ಕೋಟಿ ಅನುದಾನವನ್ನು ರಾಜ್ಯ ಸರ್ಕಾರದಿಂದ ಮೀಸಲಿಡಲಾಗಿದೆ ಎಂದು ಹೇಳಿದರು. ಅರ್ಜಿ ಸ್ವೀಕೃತಿ ಈಗಾಗಲೇ ಪ್ರಾರಂಭವಾಗಿದ್ದು, ಇದುವರೆವಿಗೆ 7729 ಅರ್ಜಿಗಳು ಸ್ವೀಕೃತವಾಗಿ 462 ಅರ್ಜಿಗಳ ಪರಿಶೀಲನಾ ಕಾರ್ಯ ಪೂರ್ಣಗೊಳಿಸಿ ತಂತ್ರಾಂಶದಲ್ಲಿ ನಮೂದಿಸಲಾಗಿದೆ. 7267 ಅರ್ಜಿಗಳು ಪರಿಶೀಲನಾ ಹಂತದಲ್ಲಿರುತ್ತದೆ. ಅರ್ಹ ಕುಟುಂಬಗಳಿಗೆ ಪರಿಹಾರ ಧನ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com