ರಾಷ್ಟ್ರೀಯ ಶಿಕ್ಷಣ ನೀತಿ ಸಂಬಂಧ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧ: ಸಿಎಂ ಬೊಮ್ಮಾಯಿ

'ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಸಂಬಂಧಿಸಿದಂತೆ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ. 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: 'ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಸಂಬಂಧಿಸಿದಂತೆ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ. 

ಎನ್ಇಪಿ ಕುರಿತು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್ ಪ್ರಸ್ತಾಪಿಸಿದ ವಿಷಯದಲ್ಲಿ ನಡೆದ ಚರ್ಚೆಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಉತ್ತರಿಸುವ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, 'ಹಳ್ಳಿಯ ವಿದ್ಯಾರ್ಥಿ ಜಾಗತಿಕವಾಗಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಒಪ್ಪಿಕೊಂಡಿದ್ದೇವೆ. ಆದರೆ, ತಯಾರಿ ಮಾಡಿಲ್ಲ. ಎನ್ಇಪಿಯಿಂದ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಇಂಥ ಬದಲಾವಣೆ ಸಂದರ್ಭದಲ್ಲಿ ಪರ ವಿರೋಧ ಅಭಿಪ್ರಾಯ ಸಾಮಾನ್ಯ’ ಎಂದು ಹೇಳಿದರು. 

‘ಅಡೆತಡೆಗಳನ್ನು ಮೀರಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ನೀತಿಯನ್ನು ರೂಪಿಸಲಾಗಿದೆ. ಇನ್ನಷ್ಟು ಚರ್ಚೆ, ವಿವಿಧ ಆಯಾಮದಲ್ಲಿ ಚರ್ಚೆ ನಡೆಯಬೇಕಿದೆ. ಸರ್ಕಾರ ಎಲ್ಲ ರೀತಿಯ ಚರ್ಚೆಗೆ ಸಿದ್ಧವಿದೆ. ಮಕ್ಕಳಿಗೆ ಹಲವು ಅವಕಾಶ, ಮುಕ್ತ ವಾತಾವರಣ, ಉತ್ಕೃಷ್ಟ ಕೌಶಲ ನೀಡಲು ಈ ನೀತಿ ಸಹಕಾರಿ ಆಗಲಿದೆ’ ಎಂದು ವಿವರಿಸಿದರು.

ಅದಕ್ಕೂ ಮೊದಲು ಮಾತನಾಡಿದ ಬಿ.ಕೆ. ಹರಿಪ್ರಸಾದ್‌ ನೀತಿಯನ್ನು ಬಲವಾಗಿ ವಿರೋಧಿಸಿದರು.‘ಈ ನೀತಿಯನ್ನು ಜಾರಿಗೊಳಿಸುವ ಮೂಲಕ ಆರೆಸ್ಸೆಸ್ ಸಿದ್ಧಾಂತಗಳನ್ನು ಹೇರಲು ಸರ್ಕಾರ ಹೊರಟಿದೆ. ಆ ಮೂಲಕ ಬಹುತ್ವ ಸಂಸ್ಕೃತಿಯನ್ನು ನಾಶ ಮಾಡಲು ಮುಂದಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ ಅವರು, ‘ಈ ನೀತಿಯು ನೆರೆ-ಹೊರೆಯಲ್ಲಿ ಸಮಾನ ಶಿಕ್ಷಣ ನೀತಿ ಎಂಬ  ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಲ್ಲ. ಎನ್ಇಪಿ ಗುಣಮಟ್ಟ, ಸಮಾನತೆ ಹಾಗೂ ಸೇರುವಿಕೆಗೆ ಒತ್ತು ನೀಡುತ್ತದೆ. ಸುದೀರ್ಘ ಚರ್ಚೆಯ ನಂತರ ಅನುಷ್ಠಾನ ಮಾಡಲಾಗುತ್ತಿದೆ' ಎಂದು ಸಮರ್ಥಿಸಿದರು.

‘ಆನ್‌ಲೈನ್‌ ಮೂಲಕ 2015ರಿಂದ ಎನ್ಇಪಿಗೆ ಸಲಹೆ ಪಡೆಯಲಾಗಿದೆ. ಕರಡು ಸಿದ್ಧಪಡಿಸಲು ಶಿಕ್ಷಣ ಭಾಗಿದಾರರಿಂದ ಸಲಹೆ ಪಡೆಯಲಾಗಿದೆ. ದೇಶದ 2 ಲಕ್ಷ ಗ್ರಾಮ ಪಂಚಾಯತಿಯಿಂದ 1,10,623 ಸಲಹೆ ಬಂದಿದೆ. ಸಮಗ್ರವಾಗಿ ಅಧ್ಯಯನ ನಡೆಸಿ, ಎನ್ಇಪಿ ರೂಪಿಸಲಾಗಿದೆ’ ಎಂದು ಹೇಳಿದರು. 

ಈ ವೇಳೆ ಮಾತನಾಡಿದ ಸಭಾಪತಿಗಳು, ಎನ್ಇಪಿ ಅನುಷ್ಠನ ಹಾಗೂ ಅದಕ್ಕೆ ಸಂಬಂಧಿಸಿದಂತೆ ಸದಸ್ಯರು ಕೇಳಿರುವ ಪ್ರಶ್ನೆ, ಸಲಹೆಗಳಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಒಟ್ಟಾಗಿ ಸಭೆ ಕರೆದು, ಸಮಸ್ಯೆಗೆ ಪರಿಹಾರ ನೀಡಬೇಕೆಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com