ಅರ್ಕಾವತಿ ಬಡಾವಣೆ ವಿವಾದ: ಬಿಡಿಎ ಅಧಿಸೂಚನೆ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್; ಮೂವರ ಸಮಿತಿ ರಚಿಸಿದ ನ್ಯಾಯಾಲಯ

ವಿವಾದಾತ್ಮಕ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ 2014ರ ಜೂನ್ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಎರಡನೇ ಅಂತಿಮ ಅಧಿಸೂಚನೆಯನ್ನು ಎತ್ತಿಹಿಡಿಯುವ ಮೂಲಕ ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. 
ಅರ್ಕಾವತಿ ಬಡಾವಣೆ ಚಿತ್ರ
ಅರ್ಕಾವತಿ ಬಡಾವಣೆ ಚಿತ್ರ

ಬೆಂಗಳೂರು: ವಿವಾದಾತ್ಮಕ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ 2014ರ ಜೂನ್ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಎರಡನೇ ಅಂತಿಮ ಅಧಿಸೂಚನೆಯನ್ನು ಎತ್ತಿಹಿಡಿಯುವ ಮೂಲಕ ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. 

ಇದರೊಂದಿಗೆ ಅರ್ಕಾವತಿ ಬಡಾವಣೆಯಲ್ಲಿ ನಿವೇಶನಕ್ಕಾಗಿ ವರ್ಷಾನುಗಟ್ಟಲೆಯಿಂದ ಕಾಯುತ್ತಿದ್ದವರಿಗೆ ಶುಭ ಸುದ್ದಿ ದೊರೆತಂತಾಗಿದೆ. ಭೂಸ್ವಾಧೀನ ಪ್ರಶ್ನಿಸಿ ಕೆ ಪಿ ಅಂಜನಪ್ಪ ಮತ್ತಿತರರು ಹಾಗೂ 16 ಹಳ್ಳಿಗಳ ಜನರು ಸಲ್ಲಿಸಿದ್ದ ಸುಮಾರು 450 ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತ್ತು. ಸುಪ್ರೀಂಕೋರ್ಟ್ ಆದೇಶದ ನಂತರ ಬಡಾವಣೆಗೆ ಹೊಂದಿಕೊಂಡಂತೆ ಅಲ್ಲಲ್ಲಿ ಖಾಲಿ ಇದ್ದ (ದ್ವೀಪಗಳ ಬಗೆಯ) ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಹೈಕೋರ್ಟ್ 2005ರಲ್ಲಿ ಮತ್ತು ಸುಪ್ರೀಂಕೋರ್ಟ್ 2010ರಲ್ಲಿ ನೀಡಿದ್ದ ಅಂಶಗಳನ್ನು ಉಲ್ಲೇಖಿಸಿ 800ಕ್ಕೂ ಹೆಚ್ಚು ಪುಟಗಳ ತೀರ್ಪಿನಲ್ಲಿ ವಿವರವಾದ ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ. 

ಸಮಿತಿ ರಚನೆ
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳಿಗೆ ಬದ್ಧವಾಗಿ ನಂತರ ಬಡಾವಣೆಗೆ ಸಂಬಂಧಿಸಿದಂತೆ ಹೊರಡಿಸಿದ್ದ ರಿಡೂ ಮತ್ತು ಡಿನೋಟಿಫಿಕೇಷನ್ ಆದೇಶಗಳನ್ನು ಪರಿಶೀಲಿಸಲು ನಿವೃತ್ತ ನ್ಯಾ. ಕೆ ಎನ್ ಕೇಶವನಾರಾಯಣ, ನಿವೃತ್ತ ಐಎಎಸ್ ಸಂದೀಪ್ ದವೆ, ನಿವೃತ್ತ ಐಪಿಎಸ್ ಅಧಿಕಾರಿ ಎನ್ ಎಸ್ ಮೇಘರಿಕ್ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ಪೀಠ ರಚಿಸಿದೆ. ನ್ಯಾಯಾಲಯಗಳ ತೀರ್ಪಿಗೆ ಬದ್ದವಾಗಿ ಸರ್ಕಾರಗಳು ರಿಡೂ, ಡಿನೋಟಿಫಿಕೇಷನ್ ಮಾಡಿರುವ ಕುರಿತು ಪರಿಶೀಲಿಸಿ ಸಮಿತಿ ವರದಿ ನೀಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅರ್ಕಾವತಿ ಬಡಾವಣೆಯಲ್ಲಿ ಮೂರು ತಿಂಗಳಲ್ಲಿ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಪೀಠವು ಆದೇಶ ಮಾಡಿದೆ. ನಿವೇಶನ ಹಂಚಿಕೆ ಮಾಡಲಾಗಿರುವವರಿಗೆ ಅದನ್ನು ಒದಗಿಸಿಕೊಡಬೇಕು. ಹಿಂದೆ ನಿವೇಶನ ಹಂಚಿಕೆ ಮಾಡಲಾಗಿರುವವರಿಗೆ ಬಿಡಿಎ ಮಾರಾಟ ಒಪ್ಪಂದ ಮಾಡಿಕೊಡಬೇಕು. ಕಂದಾಯ ನಿವೇಶನಗಳ ಸಂಬಂಧ ಯಾವುದಾದರೂ ಸಮಸ್ಯೆಗಳಿದ್ದರೆ ಅವುಗಳನ್ನೂ ಸಹ ನ್ಯಾಯಾಲಯದ ತೀರ್ಪಿನ ಅನುಸಾರ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.

ಬಡಾವಣೆಗೆ ಸಂಬಂಧಿಸಿದಂತೆ 2003ರ ಫೆಬ್ರುವರಿ 3ರಂದು ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಅದಕ್ಕಿಂತ ಮುಂಚೆ ಪಕ್ಕಾ ಮನೆಗಳನ್ನು ನಿರ್ಮಿಸಿದ್ದರೆ ಅವುಗಳು ಕಾನೂನು ಬದ್ಧವಾಗಿರಲಿವೆ. ಸಿಮೆಂಟ್ ಶೀಟ್, ಹೆಂಚಿನ ಚಾವಣಿಗಳ ಕಟ್ಟಡಗಳಿದ್ದರೆ ಅವುಗಳನ್ನು ಉಳಿಸಲಾಗದು. ಆ ಬಗ್ಗೆ ಸಮಿತಿ ಬಿಡಿಎಗೆ ವರದಿ ಸಲ್ಲಿಸಬೇಕು. ವರದಿಯ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಬಿಡಿಎಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸುಪ್ರೀಂಕೋರ್ಟ್ ಹೇಳಿದ್ದೇನು?
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 2005ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು 2010ರಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ವೆಂಕಟೇಶಪುರ, ಕೆಂಪಾಪುರ ಮತ್ತು ನಾಗಾವಾರ ಗ್ರಾಮಗಳ ಡಿನೋಟಿಫಿಕೇಷನ್ ಆಗಿರುವ ಪ್ರದೇಶಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಆ ಕುರಿತು ಹೈಕೋರ್ಟ್ಗೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಬಡಾವಣೆಯ ಮುಖ್ಯ ಪ್ರದೇಶದಿಂದ ಅಥವಾ ದ್ವೀಪದ ರೀತಿ ಇರುವ ಸ್ಥಳಗಳನ್ನು ಸ್ವಾಧೀನದಿಂದ ಕೈ ಬಿಡಬೇಕು. ತಮ್ಮ ಭೂಮಿಯನ್ನೂ ಡಿನೋಟಿಫೈ ಮಾಡುವಂತೆ ಭೂ ಮಾಲೀಕರು ಅರ್ಜಿ ಸಲ್ಲಿಸಿದರೆ ಅವುಗಳನ್ನು ಬಿಡಿಎ ಪರಿಶೀಲಿಸಿ ತೀರ್ಮಾನಿಸಬೇಕು ಎಂದು ನಿರ್ದೇಶಿಸಿತ್ತು. ವಶಪಡಿಸಿಕೊಂಡು ಪ್ರತಿ ಅರ್ಧ ಎಕರೆಗೆ 30 x 40ರ ಒಂದು ನಿವೇಶನದಂತೆ ಗರಿಷ್ಠ ಐದು ನಿವೇಶನಗಳನ್ನು ಪರಿಹಾರದ ಜೊತೆಗೆ ನೀಡಬೇಕು ಎಂದೂ ಆದೇಶ ನೀಡಿತ್ತು
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com