ಎದೆ ಹಾಲುಣಿಸುವುದು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು, ಅಪಹೃತ ಮಗುವನ್ನು ಹೆತ್ತ ತಾಯಿಗೆ ಹಿಂತಿರುಗಿಸುವಂತೆ 'ಹೈ' ಆದೇಶ

ಮಗುವಿಗೆ ಎದೆಹಾಲುಣಿಸುವುದು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು. ಇದನ್ನು ಸಂವಿಧಾನದ ಪರಿಚ್ಛೇದ 21ರ ಮೂಲಭೂತ ಹಕ್ಕು ಖಚಿತಪಡಿಸುತ್ತದೆ. ಇದೇ ಹಕ್ಕನ್ನು ಮಗುವಿಂದಲೂ ಪ್ರತ್ಯೇಕಿಸಲಾಗದು ಎಂದು ಹೈಕೋರ್ಟ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ವೇಳೆ ಅಭಿಪ್ರಾಯಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಗುವಿಗೆ ಎದೆಹಾಲುಣಿಸುವುದು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು. ಇದನ್ನು ಸಂವಿಧಾನದ ಪರಿಚ್ಛೇದ 21ರ ಮೂಲಭೂತ ಹಕ್ಕು ಖಚಿತಪಡಿಸುತ್ತದೆ. ಇದೇ ಹಕ್ಕನ್ನು ಮಗುವಿಂದಲೂ ಪ್ರತ್ಯೇಕಿಸಲಾಗದು ಎಂದು ಹೈಕೋರ್ಟ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ವೇಳೆ ಅಭಿಪ್ರಾಯಪಟ್ಟಿದೆ.

ಹುಟ್ಟುತ್ತಲೇ ಹೆರಿಗೆ ಆಸ್ಪತ್ರೆಯಿಂದ ಕಾಣೆಯಾಗಿರುವ ಮಗುವನ್ನು ಸಾಕು ತಾಯಿಯಿಂದ ಹಿಂಪಡೆದು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಮಗುವಿನ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಇತ್ಯರ್ಥಪಡಿಸುವ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೇ ವೇಳೆ ಸಾಕು ತಾಯಿ ಮಗುವನ್ನು ನೈಜ ತಾಯಿಗೆ ಹಿಂದಿರುಗಿಸುವಂತೆ ಸೂಚಿಸಿರುವ ಪೀಠ, ಯಾವ ತಪ್ಪು ಇಲ್ಲದೆಯೂ ಈ ಮಗು ತನ್ನ ತಾಯಿಯಿಂದ ಹಾಲುಣಿಸದೆ ಬೇರ್ಪಟ್ಟಿರುವುದು ನಿಜಕ್ಕೂ ದುರಾದೃಷ್ಟಕರ. ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ಸಂಭವಿಸಬಾರದು. ಹಾಗೆಯೇ, ಹಾಲುಣಿಸುವಿಕೆಯು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು ಎಂದು ಹೇಳಿದೆ. ಶಿಶುವಿನ ಎದೆಹಾಲುಣಿಸುವಿಕೆಯೂ ಈ ಹಕ್ಕಿನೊಂದಿಗೆ ಅಳವಡಿಸಬೇಕಿದೆ ಎಂದು ತಿಳಿಸಿದೆ.

ವಿಚಾರಣೆ ವೇಳೆ ಸಾಕು ತಾಯಿ ಪರ ವಕೀಲರು ವಾದಿಸಿ, ನೈಜ ತಾಯಿಗೆ ಈಗಾಗಲೇ ಎರಡು ಮಕ್ಕಳಿವೆ. ಸಾಕು ತಾಯಿಗೆ ಒಂದು ಮಗುವೂ ಇಲ್ಲ. ಜತೆಗೆ ಇಷ್ಟು ಕಾಲ ಸಾಕು ತಾಯಿ ಮಗುವನ್ನು ತುಂಬಾ ಪ್ರೀತಿಯಿಂದ ಆರೈಕೆ ಮಾಡಿದ್ದಾರೆ. ಹೀಗಾಗಿ, ಮಗುವನ್ನು ಸಾಕು ತಾಯಿ ಸುಪರ್ದಿಗೆ ನೀಡಬೇಕು ಎಂಬ ಕೋರಿಕೆಯನ್ನ ಪೀಠ ತಿರಸ್ಕರಿಸಿದೆ. ಹಾಗೆಯೇ, ಅನುವಂಶಿಕ ಪೋಷಕರ ಹಕ್ಕುಗಳ ಮುಂದೆ ಅಪರಿಚಿತರ ಹಕ್ಕುಗಳನ್ನು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ.

ಏನಿದು ಪ್ರಕರಣ...?
ಒಂದೂವರೆ ವರ್ಷದ ಹಿಂದೆ ಚಾಮರಾಜಪೇಟೆ ಆಸ್ಪತ್ರೆಯಲ್ಲಿ ಉಸ್ಮಾಭಾನು ಗಂಡುಶಿಶುವಿಗೆ   ಜನ್ಮ ನೀಡಿದ್ದರು. ಮಗುವಿನ ತಂದೆ ನವೀದ್ ಪಾಷಾ ಸೇರಿದಂತೆ ಕುಟುಂಬದ ಎಲ್ಲರಿಗೂ ತೀವ್ರ ಸಂತಸವಾಗಿತ್ತು. ಇದು ಶೀಘ್ರದಲ್ಲೇ ಕಣ್ಮರೆಯಾಯಿತು. ಕಾರಣ ಮಗು ಕಾಣೆಯಾಗಿತ್ತು. ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಚಾಮರಾಜಪೇಟೆ ಪೊಲೀಸರು ತನಿಖೆ ಆರಂಭಿಸಿದ್ದರು.

ಮಗು ಪತ್ತೆಯಾಯಿತು. ಆದರೆ ಪ್ರಕರಣ ಕಗ್ಗಂಟಾಯಿತು. ಕೊಪ್ಪಳ ಮೂಲದ ದಂಪತಿ ಮಗು ತಮ್ಮದೆಂದು ಪಟ್ಟು ಹಿಡಿದಿದ್ದರು. ಬೆಂಗಳೂರು ನಗರದ ಪಾದರಾಯನಪುರ ನಿವಾಸಿಗಳಾದ ದಂಪತಿಯೂ ಮಗು ತಮ್ಮದೆಂದು ಹಠ ಹಿಡಿದ್ದಿದ್ದರು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಪೊಲೀಸರು ಮಗುವಿನ ಅಸಲಿ ತಾಯಿ ತಂದೆ ಯಾರು ಎಂಬುದನ್ನು ಪತ್ತೆ ಹಚ್ಚಲು ಡಿ.ಎನ್.ಎ. ಮೊರೆ ಹೋಗಲು ನಿರ್ಧರಿಸಿದರು.

ಮಗು ಸೇರಿದಂತೆ ಐವರನ್ನು ಡಿ.ಎನ್.ಐ. ಪರೀಕ್ಷೆಗೆ ಒಳಪಡಿಸಲಾಯಿತು. ಇದರ ವರದಿ ಜುಲೈ ತಿಂಗಳಿನಲ್ಲಿ ಪೊಲೀಸರ ಕೈ ಸೇರಿತ್ತು. ವರದಿ ನೋಡಿದಾಗ ಮಗುವಿನ ಅಸಲಿ ತಾಯಿ ತಂದೆ ಪಾದರಾಯನಪುರ ನಿವಾಸಿಗಳಾದ ಉಸ್ಮಾಭಾನು ಮತ್ತು ನವೀದ್ ಪಾಷಾ ಅವರದೆಂದು ತಿಳಿಯಿತು. ಇದರಂತೆ ಪೊಲೀಸರು ಡಿ.ಎನ್.ಎ. ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ವರದಿಯಂತೆ ನ್ಯಾಯಾಲಯ ಅಸಲಿ ತಾಯಿತಂದೆಗಳಿಗೆ ಹಸ್ತಾಂತರಿಸಲು ಆಧೇಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com