ಬೆಂಗಳೂರು: ಮನೆ ಮಾಲೀಕನ ಎಡವಟ್ಟು; ತಿಗಣೆ ಔಷಧಿಗೆ ಆರು ವರ್ಷದ ಬಾಲಕಿ ಬಲಿ, ಪೋಷಕರು ಅಸ್ವಸ್ಥ!

ಮನೆ ಮಾಲೀಕನ ಎಡವಟ್ಟಿಗೆ 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದೆ. ತಿಗಣೆ ನಿಯಂತ್ರಣಕ್ಕಾಗಿ ಮನೆಗೆ ಸಿಂಪಡಿಸಿದ ಕ್ರಿಮಿನಾಶಕವು ಪುಟ್ಟ ಬಾಲಕಿಯ ಜೀವವನ್ನೇ ತೆಗೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮನೆ ಮಾಲೀಕನ ಎಡವಟ್ಟಿಗೆ 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದೆ. ತಿಗಣೆ ನಿಯಂತ್ರಣಕ್ಕಾಗಿ ಮನೆಗೆ ಸಿಂಪಡಿಸಿದ ಕ್ರಿಮಿನಾಶಕವು ಪುಟ್ಟ ಬಾಲಕಿಯ ಜೀವವನ್ನೇ ತೆಗೆದಿದೆ.

ಕೆಲಸಕ್ಕಾಗಿ ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಬಾಲಕಿ ಅಹಾನಾಳ ತಂದೆ ವಿನೋದ್‌ ಮತ್ತು ತಾಯಿ ನಿಶಾ ಇಲ್ಲಿಯೇ ಸುಂದರ ಬದುಕು ಕಟ್ಟಿಕೊಂಡಿದ್ದರು. ಎಂಬಿಎ ಪದವೀಧರರಾದ ವಿನೋದ್‌, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಪತ್ನಿ ಮತ್ತು ಮುದ್ದಿನ ಮಗಳ ಜತೆ ವಸಂತನಗರದ ಮಾರಮ್ಮ ದೇವಸ್ಥಾನ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅದೇ ಮನೆ ಈಗ ದಂಪತಿಯ ಬದುಕಿನ ಖುಷಿಯನ್ನೇ ಕಸಿದಿದೆ.

ವಿನೋದ್‌ ದಂಪತಿ ವಾಸವಿದ್ದ ಮನೆಯೂ ಸೇರಿದೆ. ಇಡೀ ಕಟ್ಟಡದಲ್ಲಿ ತಿಗಣೆ ಕಾಟ ಹೆಚ್ಚಿದ್ದ ಕಾರಣಕ್ಕೆ ಶಿವಪ್ರಸಾದ್‌ ನಾಲ್ಕೂ ಮನೆಗಳಿಗೆ ಕ್ರಿಮಿನಾಶಕ ಸಿಂಪಡಿಸಲು ನಿರ್ಧರಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಿ ಜುಲೈ 27ರಂದು ತಿಗಣೆ ನಾಶಕ ಔಷಧ ಸಿಂಪಡಣೆ ಮಾಡಿಸಿದ್ದರು. ನಂತರ ವಿನೋದ್‌ ದಂಪತಿಯ ಮನೆ ಹೊರತುಪಡಿಸಿ ಉಳಿದ 3 ಮನೆಗಳನ್ನು ಸ್ವಚ್ಛ ಮಾಡಿಸಿದ್ದರು. ಬಳಿಕ ಇತರೆ ಬಾಡಿಗೆದಾರರು ಜುಲೈ 31ರಂದು ತಮ್ಮ ಮನೆಗಳಿಗೆ ವಾಪಸ್‌ ಬಂದಿದ್ದರು.

ತಿಗಣೆ ನಾಶಕ ಔಷಧ ಸಿಂಪಡಣೆ ಹಿನ್ನೆಲೆಯಲ್ಲಿ ಮನೆ ಮಾಲೀಕರ ಸೂಚನೆಯಂತೆ ವಿನೋದ್‌ ದಂಪತಿ ಮಗಳ ಜತೆ ಜುಲೈ 25ರಂದೇ ಕೇರಳಕ್ಕೆ ಹೋಗಿದ್ದರು. ಆ.1ರ ನಸುಕಿನಲ್ಲಿ ಬೆಂಗಳೂರಿಗೆ ಹಿಂದಿರುಗಿದ ದಂಪತಿ ವಸಂತನಗರದ ಮನೆಗೆ ಬಂದು ಕೆಲ ಕಾಲ ವಿಶ್ರಾಂತಿ ಪಡೆದಿದ್ದರು. ನಂತರ ಮನೆಯಲ್ಲೇ ಕಾಫಿ ಮಾಡಿಕೊಂಡು ಮಗಳ ಜತೆ ಕುಡಿದಿದ್ದರು. ಬಳಿಕ ಸ್ವಲ್ಪ ಸಮಯದಲ್ಲೇ ಮೂರೂ ಮಂದಿಗೆ ವಾಂತಿಯಾಗಿದೆ. ಜತೆಗೆ ಉಸಿರಾಟಕ್ಕೆ ಸಮಸ್ಯೆಯಾಗಿ ಅಸ್ವಸ್ಥಗೊಂಡ ಅವರು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅಹಾನಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.

ಬಾಲಕಿಯ ಸಾವಿನ ಸಂಬಂಧ ಹೈಗ್ರೌಂಡ್ಸ್‌ ಠಾಣೆಗೆ ದೂರು ಕೊಟ್ಟಿರುವ ನಿಶಾ ಅವರ ಅಕ್ಕ ಲತಾ, ''ಮನೆ ಮಾಲೀಕ ಶಿವಪ್ರಸಾದ್‌ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ. ತಿಗಣೆ ನಾಶಕ ಸಿಂಪಡಣೆ ಬಳಿಕ ಅವರು ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ'' ಎಂದು ಆರೋಪಿಸಿದ್ದಾರೆ. ಪೊಲೀಸರು ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಶಿವಪ್ರಸಾದ್‌ ಅವರನ್ನು ಬಂಧಿಸಿದ್ದಾರೆ.

ಶಿವಪ್ರಸಾದ್‌, ವಿನೋದ್‌ ದಂಪತಿಯ ಮನೆಗೆ ತಿಗಣೆ ನಾಶಕ ಸಿಂಪಡಣೆ ಮಾಡಿಸಿದ ಬಳಿಕ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಸಂಪೂರ್ಣ ಬಂದ್‌ ಮಾಡಿಸಿದ್ದರು. ಮನೆಯನ್ನು ನೀರಿನಿಂದ ಸ್ವಚ್ಛ ಮಾಡಿಸಿರಲಿಲ್ಲ. ತಿಗಣೆ ನಾಶಕ ಔಷಧ ಸಿಂಪಡಣೆ ವೇಳೆ ಮನೆಯಲ್ಲಿನ ಪಾತ್ರೆಗಳಿಗೂ ತಾಗಿದೆ. ಮನೆಗೆ ಹಿಂದಿರುಗಿದ ವಿನೋದ್‌ ದಂಪತಿ ಪಾತ್ರೆಗಳನ್ನು ತೊಳೆಯದೆ ಅವುಗಳಲ್ಲೇ ಕಾಫಿ ಮಾಡಿಕೊಂಡು ಕುಡಿದಿದ್ದರು. ಮನೆ ತುಂಬೆಲ್ಲಾ ತುಂಬಿಕೊಂಡಿದ್ದ ವಿಷಪೂರಿತ ಗಾಳಿಯ ಸೇವನೆಯಿಂದ ಆ ಮೂರೂ ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಪೋಷಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. “ನಾವು ಮನೆಯಿಂದ ರಾಸಾಯನಿಕಗಳ ಮಾದರಿಗಳನ್ನು ಸಂಗ್ರಹಿಸಿದ್ದೇವೆ ಮತ್ತು ಅವುಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ.  ಮಾಲೀಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು  ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com