ಉದ್ಯಮಿ ಪುತ್ರನ ಅಪಹರಣ, 4 ಕೋಟಿ ರೂ. ಗೆ ಬೇಡಿಕೆ: ಚಾರಿಟಿ ಮುಖ್ಯಸ್ಥೆ ಸೇರಿ ಇಬ್ಬರ ಬಂಧನ

ಉದ್ಯಮಿ ಪುತ್ರನ ಅಪಹರಣ ಮಾಡಿ 4 ಕೋಟಿ ರೂಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಚಾರಿಟಿಯೊಂದರ ಮುಖ್ಯಸ್ಥೆ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉದ್ಯಮಿ ಪುತ್ರನ ಅಪಹರಣ ಮಾಡಿ 4 ಕೋಟಿ ರೂಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಚಾರಿಟಿಯೊಂದರ ಮುಖ್ಯಸ್ಥೆ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಗುತ್ತಿಗೆದಾರ ಹಾಗೂ ಉದ್ಯಮಿ ರವಿ ಎಂಬುವವರ ಪುತ್ರ ಸೂರಜ್‌ ಎಂಬಾತನನ್ನು ಅಪಹರಿಸಿ 25 ಲಕ್ಷ ರೂ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ (ಸ್ಯಾಟಲೈಟ್‌ ಬಸ್‌ ನಿಲ್ದಾಣ) ಎ.ಪಿ.ಜೆ ಅಬ್ದುಲ್‌ ಕಲಾಂ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷೆ ಪುಷ್ಪಲತಾ (30) ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ ಆಕೆಯ ಸಂಬಂಧಿ, ಮೈಸೂರು ರಸ್ತೆಯ ಶಾರದಾ ಶಾಲೆ ಬಳಿಯ ನಿವಾಸಿ ರಾಕೇಶ್‌ನನ್ನು (27) ಬ್ಯಾಟರಾಯನಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ಬಂಧಿತರಿಂದ 20 ಲಕ್ಷ ರೂ ನಗದು, ಏರ್ಗನ್‌ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಅರ್ಜುನ್‌ ಹಾಗೂ ಸಂತೋಷ್‌ ಎಂಬುವವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಮುಂದುವರಿದಿದೆ. ಎಸಿಪಿ ಟಿ.ಕೋದಂಡರಾಮ, ಇನ್‌ಸ್ಪೆಕ್ಟರ್‌ ಶಂಕರನಾಯ್ಕ, ಪಿಎಸ್‌ಐ ವೀರಭದ್ರಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಈ ತಂಡವನ್ನು ಬಂಧಿಸಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.

‘ತಮಗೆ ಐಎಎಸ್‌ ಅಧಿಕಾರಿಗಳ ಪರಿಚಯವಿದ್ದು, ಸರ್ಕಾರದಿಂದ ಕಾಮಗಾರಿಯ ಗುತ್ತಿಗೆ ಕೊಡಿಸುವುದಾಗಿ ಸೂರಜ್‌ನನ್ನು ಕಚೇರಿಗೆ ಕರೆಸಿಕೊಂಡ ಪುಷ್ಪಾ ಮತ್ತು ಗ್ಯಾಂಗ್ ಆತನಿಂದ ಮೊಬೈಲ್‌ ಕಸಿದು, ಬಾಯಿಗೆ ಬಟ್ಟೆ ತುರುಕಿ ಅಪಹರಣ ಮಾಡಿದ್ದರು. ಆರಂಭದಲ್ಲಿ ಅಪಹರಣಕಾರರು 4 ಕೋಟಿ ರೂಗೆ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ಇಲ್ಲ ಎಂದಾಗ, ನಕಲಿ ರಿವಾಲ್ವರ್‌ (ಏರ್ ಗನ್) ತೋರಿಸಿ ಹಣ ನೀಡದಿದ್ದರೆ ಜೀವಂತವಾಗಿ ವಾಪಸ್‌ ಕಳುಹಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಅದಾದ ಮೇಲೆ ಬೇಡಿಕೆಯ ಮೊತ್ತ ಕಡಿಮೆಗೊಳಿಸಿದ್ದ ಆರೋಪಿಗಳು, ಸೂರಜ್‌ ಸ್ನೇಹಿತನಿಂದ 25 ಲಕ್ಷ ರೂ ಪಡೆದು ಬಿಟ್ಟು ಕಳುಹಿಸಿದ್ದರು’ ಎಂದು ಡಿಸಿಪಿ ತಿಳಿಸಿದರು.

‘ಪೊಲೀಸರಿಗೆ ದೂರು ನೀಡಿದರೆ ಕುಟುಂಬವನ್ನು ಜೀವಂತವಾಗಿ ಬಿಡುವುದಿಲ್ಲ. ಅಲ್ಲದೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಪುಷ್ಪಾ ಬೆದರಿಸಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಬಿ.ಕಾಂ ತನಕ ವ್ಯಾಸಂಗ ಮಾಡಿದ್ದ ಪುಷ್ಪಾ ಕೆಲಸ ಸಿಗದಿದ್ದಾಗ ಹನುಮಂತಯ್ಯ ಕಟ್ಟಡದಲ್ಲಿ ಸೋಷಿಯಲ್‌ ವೆಲ್‌ಫೇರ್ ಹೆಸರಿನ ಸಂಸ್ಥೆ ಆರಂಭಿಸಿದ್ದರು. ಕೇಂದ್ರ, ರಾಜ್ಯ ಸರ್ಕಾರದ ಟೆಂಡರ್‌ ಕೊಡಿಸುವುದಾಗಿ ನಂಬಿಸಿ ಜನರಿಗೆ ಮೋಸ ಮಾಡುತ್ತಿದ್ದರು. ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ ದಂಧೆಯಲ್ಲಿ ತೊಡಗಿದ್ದರು. ಇದರಿಂದ ಹೆಚ್ಚಿನ ಹಣ ಸಂಪಾದನೆ ಆಗದಿದ್ದಾಗ ಉದ್ಯಮಿ ಪುತ್ರನ ಅಪಹರಿಸಿ ಕೋಟ್ಯಂತರ ರೂಪಾಯಿ ಹಣ ಗಳಿಸಲು ಮುಂದಾಗಿದ್ದರು’ ಎಂದು ಹೇಳಲಾಗಿದೆ.

ಇನ್ನು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅರ್ಜುನ್‌ ‘ಎ’ ದರ್ಜೆಯ ರೌಡಿ ಆಗಿದ್ದು, ಆತನ ವಿರುದ್ಧ ಒಂದು ಕೊಲೆ, ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com