ರಾಜಧಾನಿ ಬೆಂಗಳೂರಿನಲ್ಲಿ ನಸುಕಿನಿಂದಲೇ ಧಾರಾಕಾರ ಮಳೆ: ವಾಹನ ಸವಾರರು ಹೈರಾಣ, ರಾಜ್ಯಾದ್ಯಂತ ಆ.31ರವರೆಗೆ ಮಳೆ

ರಾಜಧಾನಿ ಬೆಂಗಳೂರಿನ ಹಲವೆಡೆ ಕಳೆದ ರಾತ್ರಿಯಿಂದ ಬೆಳಗ್ಗೆಯವರೆಗೆ ಸತತ ಮಳಯಿಂದಾಗಿ ಕಚೇರಿ, ಕೆಲಸ ಕಾರ್ಯಗಳಿಗೆ ತೆರಳುವವರು, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಪರದಾಡುವ ಪರಿಸ್ಥಿತಿ ಉಂಟಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಕಳೆದ ರಾತ್ರಿಯಿಂದ ಬೆಳಗ್ಗೆಯವರೆಗೆ ಸತತ ಮಳಯಿಂದಾಗಿ ಕಚೇರಿ, ಕೆಲಸ ಕಾರ್ಯಗಳಿಗೆ ತೆರಳುವವರು, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಪರದಾಡುವ ಪರಿಸ್ಥಿತಿ ಉಂಟಾಯಿತು.

ಉದ್ಯಾನನಗರಿಯ ಕೆಲವು ಕಡೆಗಳಲ್ಲಿ ಇನ್ನೂ ಜಿಟಿ ಜಿಟಿ ಮಳೆ ಮುಂದುವರಿದಿದೆ. ಅತ್ಯಂತ ಜನನಿಬಿಡ ಪ್ರದೇಶವಾದ ಕೆ.ಆರ್​ ಮಾರ್ಕೇಟ್, ಕಾರ್ಪೊರೇಷನ್, ಶಾಂತಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಮಳೆ ನಸುಕಿನಿಂದಲೇ ಧಾರಾಕಾರ ಸುರಿದಿದೆ. 

ಹೊಂಡ-ಗುಂಡಿಗಳಿಂದ ರಸ್ತೆ ತುಂಬಿಹೋಗಿ ವಾಹನ ಸವಾರರು ಬೆಂಗಳೂರಿನಲ್ಲಿ ಈಗಾಗಲೇ ಪರಿತಪಿಸುತ್ತಿರುವಾಗ ಮಳೆಯಿಂದಾಗಿ ಮತ್ತಷ್ಟು ಪರದಾಡುವಂತಾಗಿದೆ. 

ಕೊಚ್ಚಿಹೋದ 15 ಸಾವಿರ ಕೋಳಿಗಳು: ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಕೆರೆಕೋಡಿ ಬಿದ್ದು ಕೋಳಿಫಾರಂಗೆ ನೀರು ನುಗ್ಗಿ ಚಿಕ್ಕಬಳ್ಳಾಪುರದ ಚೋಳಶೆಟ್ಟಿಹಳ್ಳಿಯ ನಾಯನಕೆರೆಯಲ್ಲಿ ಎನ್.ಲಕ್ಷ್ಮೀನಾರಾಯಣರೆಡ್ಡಿ ಎಂಬುವವರಿಗೆ ಸೇರಿದ ಕೋಳಿಫಾರಂನಿಂದ ನೀರಿನ ರಭಸಕ್ಕೆ 15 ಸಾವಿರ ಕೋಳಿಗಳು ಕೊಚ್ಚಿಹೋಗಿವೆ.

ವಾಯುಭಾರ ಕುಸಿತ, ಆ. 31ರವರೆಗೆ ಮಳೆ: ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕಳೆದ 5 ದಿನಗಳಿಂದ ಕರ್ನಾಟಕದ ಅಲ್ಲಲ್ಲಿ ಮಳೆಯಾಗುತ್ತಿದೆ. ಇನ್ನೂ ಒಂದು ವಾರ ಆಗಸ್ಟ್​ 31ರವರೆಗೂ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಳೆಯವರೆಗೂ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮೀನುಗಾರರಿಗೆ ಎಚ್ಚರಿಕೆ: ಮತ್ತೊಂದೆಡೆ ಕರಾವಳಿ ಜಿಲ್ಲೆಯ ಸಮುದ್ರ ಭಾಗದಲ್ಲಿ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

ದೇಶದ ಹಲವು ರಾಜ್ಯಗಳಲ್ಲಿ ಮಳೆ: ಮುಂದಿನ ಮೂರ್ನಾಲ್ಕು ದಿನಗಳ ಕಾಲ ಒಡಿಶಾ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com