ಹೆಚ್ಚಿದ ಬೀದಿ ನಾಯಿಗಳ ಹಾವಳಿ: ನಾಯಿ ಕಡಿತಕ್ಕೆ ಬಳ್ಳಾರಿಯಲ್ಲಿ ಇಬ್ಬರು ಮಕ್ಕಳ ಸಾವು!

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನ.22ರಿಂದ 25ರ ನಡುವೆ ನಾಯಿ ಕಡಿತದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಮೃತ ಬಾಲಕಿ ಸುರಕ್ಷಿತಾ.
ಮೃತ ಬಾಲಕಿ ಸುರಕ್ಷಿತಾ.

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನ.22ರಿಂದ 25ರ ನಡುವೆ ನಾಯಿ ಕಡಿತದಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಮೃತ ಮಕ್ಕಳನ್ನು ಸುರಕ್ಷಿತಾ ಎಂ (3) ಮತ್ತು ಶಾಂತಕುಮಾರ್ ಟಿ (7) ಎಂದು ಗುರ್ತಿಸಲಾಗಿದೆ. ಮಕ್ಕಳು ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಯಿಗಳು ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.

ನಾಯಿ ದಾಳಿ ಮಾಡಿರುವ ಈ ಘಟನೆಗಳು ಇದೀಗ ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿದ್ದು, ಮಕ್ಕಳನ್ನು ಹೊರಗೆ ಆಟವಾಡಲು ಬಿಡಲು ಹೆದರುತ್ತಿರುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಒಂದು ಪ್ರಕರಣದಲ್ಲಿ, ಮಗುವಿನ ಮೇಲೆ ದಾಳಿ ಮಾಡಿದ ನಾಯಿಗೆ ರೇಬಿಸ್ ಇತ್ತು ಎಂದು ತಿಳಿದುಬಂದಿದೆ. ಬಾದನಹಟ್ಟಿ ಗ್ರಾಮದಲ್ಲಿ ಬಹುತೇಕ ಪ್ರತಿ ಮನೆಯಲ್ಲೂ ಸಾಕು ನಾಯಿಗಳಿದ್ದು, ಕೆಲವೊಮ್ಮೆ ಮಾಲೀಕರೇ ಅವುಗಳನ್ನು ಸಾಕಲು ಸಾಧ್ಯವಾಗದೆ ಬೀದಿಗಳಿಗೆ ಬಿಡುತ್ತಿದ್ದಾರೆ. ಇಂತಹ ನಾಯಿಗಳೇ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಎಂದು ಹೇಳಲಾಗುತ್ತಿದ.

ಎರಡು ಘಟನೆಗಳ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮಂಡಳಿಯು ಆರೋಗ್ಯಾಧಿಕಾರಿಗಳ ತಂಡವನ್ನು ನಿಯೋಜನೆಗೊಳಿಸಿದೆ.

ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ದನ ಎಚ್.ಎಲ್ ಮಾತನಾಡಿ, ಎರಡು ದಿನಗಳ ಹಿಂದೆ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದೆ. ಮೂರು ವರ್ಷದ ಬಾಲಕಿ ಹೊರಗೆ ಆಟವಾಡುತ್ತಿದ್ದಾಗ ರೇಬೀಸ್ ಸೋಂಕಿತ ನಾಯಿಯೊಂದು ಆಕೆಯ ಮೇಲೆ ದಾಳಿ ಮಾಡಿದೆ. ನಾಯಿ ಕಡಿತದಿಂದ ಬಾಲಕಿಯ ತಲೆ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಏಳು ವರ್ಷದ ಬಾಲಕನನ್ನು ತಕ್ಷಣವೇ ಪೋಷಕರು ಆಸ್ಪತ್ರೆಗೆ ಕರೆದೊಯ್ಯದೆ, ಮನೆಮದ್ದು ನೀಡಿದ್ದಾರೆ. ಈ ಕಾರಣದಿಂದ ಬಾಲಕ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ.

ಬಾದನಹಟ್ಟಿ ಗ್ರಾಮದ ನಿವಾಸಿ ರಾಮಪ್ಪ ಹರಿಜನ ಮಾತನಾಡಿ, ಇಲ್ಲಿನ ನಿವಾಸಿಗಳು ಮನೆಯಿಂದ ಹೊರಗೆ ಹೋಗುವಾಗ ದೊಣ್ಣೆ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. “ಬಾಲಕಿಯ ಮೇಲೆ ದಾಳಿ ಮಾಡಿದ ನಾಯಿಯನ್ನು ನಂತರ ಗ್ರಾಮಸ್ಥರ ಗುಂಪೊಂದು ಕೊಂದು ಹಾಕಿತು. ಇಬ್ಬರು ಮಕ್ಕಳ ಸಾವಿನಿಂದ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com