ಕಬ್ಬಿನ ಉಪ ಉತ್ಪನ್ನದ ಲಾಭಾಂಶ ರೈತರಿಗೆ ನೀಡಲು ಸರ್ಕಾರ ಮುಂದು!

ಕಬ್ಬಿನ ಉಪ ಉತ್ಪನ್ನ ಎಥೆನಾಲ್‌ ಮೇಲಿನ ಲಾಭಾಂಶವನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಮೊದಲ ಹಂತದಲ್ಲಿ ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ಬಂಪರ್‌ ಕೊಡುಗೆ ಘೋಷಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಬ್ಬಿನ ಉಪ ಉತ್ಪನ್ನ ಎಥೆನಾಲ್‌ ಮೇಲಿನ ಲಾಭಾಂಶವನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಮೊದಲ ಹಂತದಲ್ಲಿ ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ಬಂಪರ್‌ ಕೊಡುಗೆ ಘೋಷಿಸಿದೆ.

ವಿಕಾಸಸೌಧದಲ್ಲಿ ಸೋಮವಾರ ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಅವರು ತಿಳಿಸಿದರು.

ಇಲ್ಲಿವರೆಗೆ ಸಕ್ಕರೆಯ ಉಪ ಉತ್ಪನ್ನಗಳ ಮೇಲೆ ಲಾಭಾಂಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಬ್ಬಿನ ಉಪ ಉತ್ಪನ್ನದ ಮೇಲೆ ರೈತರಿಗೆ ಲಾಭಾಂಶ ನೀಡಲು ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಉಪ ಉತ್ಪನ್ನಗಳ ಲಾಭಾಂಶ ಬೇಕೆಂದು ಅನೇಕ ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಅದರಂತೆ, ಮೊದಲ ಹಂತದಲ್ಲಿ ಕಬ್ಬಿನ ಉಪ ಉತ್ಪನ್ನ ಎಥೆನಾಲ್‌ ಮೇಲಿನ ಲಾಭ ನೀಡಲು ಸರ್ಕಾರ ಮುಂದಾಗಿದ್ದು, ಎಫ್ಆರ್‌ಪಿ ದರದ ಪಾವತಿ ಬಳಿಕ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 50 ರೂಪಾಯಿಯಂತೆ ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ನಿರ್ಣಯದ ಕುರಿತು ತಕ್ಷಣ ಆದೇಶ ಹೊರಡಿಸುವಂತೆ ಕಬ್ಬು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸಚಿವರ ಹೇಳಿಕೆ ಬೆನ್ನಲ್ಲೇ ರೈತ ಸಂಘವು ಉಪವಾಸ ಸತ್ಯಾಗ್ರವನ್ನು ಹಿಂಪಡೆದಿದೆ. ಆದರೆ, ಸಚಿವರ ಭರವಸೆ ನೀಡಿರುವ ಹಣವು ತೃಪ್ತಿ ತಂದಿಲ್ಲ ಎಂದು ಹೇಳಿದ್ದು, ಉಪವಾಸ ಬದಲಿಗೆ ಅಹೋರಾತ್ರಿ ಧರಣಿ ಮುಂದುವರೆಸುವುದಾಗಿ ತಿಳಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಬೆಳೆಗಳಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗೆ ಒತ್ತಾಯಿಸಿ ಹಲವು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ನಡುವೆ ಕಬ್ಬಿನ ಉಪಉತ್ಪನ್ನಗಳ ಲಾಭದ ಹಂಚಿಕೆಯನ್ನು ಪರಿಶೀಲಿಸಲು ರಾಜ್ಯ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com