ಬೆಂಗಳೂರು: ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆಯ ನಿವಾರಣೆಗಾಗಿ ಗ್ರಾಮೀಣ ಭಾಗಗಳಲ್ಲಿ ಶಾಲೆ ಸೇರಿದಂತೆ ಮಕ್ಕಳಿರುವ ಜಾಗಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಬುಧವಾರ ಸೂಚನೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯೋಜಿಸಿದ್ದ ‘ಅಪೌಷ್ಟಿಕತೆ ಮತ್ತು ರಕ್ತಹೀನತೆ ಮುಕ್ತ ಕರ್ನಾಟಕ’ ಕುರಿತ ಕಾರ್ಯಾಗಾರದಲ್ಲಿ ಸಚಿವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಟ್ಟುಗೂಡಿಸಿ ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ನಮ್ಮ ಇಲಾಖೆಯ ದಾಖಲೆಗಳನ್ನು ಗಮನಿಸಿದರೆ ಗುರಿ ಮುಟ್ಟಿದ್ದೇವೆ ಎಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ ನಿಜವಾಗಿ ಆತ್ಮಾವಲೋಕ ಮಾಡಿಕೊಂಡರೆ ನಾವು ಸಂಪೂರ್ಣವಾಗಿ ತಪಾಸಣೆ ನಡೆಸುತ್ತಿಲ್ಲ ಎಂಬುದು ಅರಿವಾಗುತ್ತದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ವೈದ್ಯರು ಶಾಲೆಗಳಿಗೆ ಹೋಗುವುದು ಅಥವಾ ಮಕ್ಕಳೇ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ ಗಂಭೀರ ಕ್ರಮ ವಹಿಸಬೇಕು ಎಂದು ಹೇಳಿದರು.
ರಿಜಿಸ್ಟರ್ ಜನರಲ್ ಆಫ್ ಇಂಡಿಯಾದ ಪ್ರಕಾರ ದೇಶದಲ್ಲಿ ತಾಯಂದಿರ ಮರಣ ಪ್ರಮಾಣ 2001-2003ರಲ್ಲಿ 301ರಷ್ಟಿತ್ತು. ಈ ಪ್ರಮಾಣ 2018-2020ರಲ್ಲಿ 97ಕ್ಕೆ ಇಳಿದಿದೆ. ಅದೇ ರೀತಿ, 2005ರಲ್ಲಿ 58 ಇದ್ದ ಶಿಶು ಮರಣ ಪ್ರಮಾಣ, 2021ರಲ್ಲಿ 27ಕ್ಕೆ ಇಳಿದಿದೆ. ಈ ಬಗ್ಗೆ ಸ್ವಲ್ಪ ಸಮಾಧಾನ ಇದ್ದರೂ ಮುಂದುವರಿಯಬೇಕಾದ ದಾರಿ ಇನ್ನಷ್ಟು ಇದೆ ಎಂದು ತಿಳಿಸಿದರು.
‘ಮಗು ಜನಿಸಿದ ನಂತರ ಎರಡು ವರ್ಷಗಳಲ್ಲೇ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಸಮಸ್ಯೆ ಪತ್ತೆ ಮಾಡಿ, ಪರಿಹರಿಸದಿದ್ದರೆ ಅದು ಮಿದುಳಿನ ಆರೋಗ್ಯ ಮೇಲೆ ಹಾಗೂ ಶರೀರದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಮಗು ಜನಿಸಿದ ಮೊದಲ ಸಾವಿರ ದಿನಗಳಲ್ಲಿ ಅಪೌಷ್ಟಿಕತೆ ಹಾಗೂ ಅನೀಮಿಯಾ ನಿವಾರಣೆಗೆ ಕ್ರಮ ವಹಿಸಬೇಕು. ಅದರಲ್ಲೂ ಹೆಣ್ಣುಮಕ್ಕಳು ಅಪೌಷ್ಟಿಕತೆಗೆ ಒಳಗಾದರೆ, ಅವರು ಬೆಳೆದು ಮಗುವಿಗೆ ಜನ್ಮ ನೀಡುವಾಗ ಆ ಮಗು ಕಡಿಮೆ ತೂಕ ಹೊಂದಿರುವ ಸಮಸ್ಯೆ ಎದುರಾಗುತ್ತದೆ’ ಎಂದರು.
Advertisement