ಫಿಫಾ ವಿಶ್ವಕಪ್ ಫುಟ್ಬಾಲ್: ಹೋಟೆಲ್‌, ಕ್ಲಬ್‌, ಬಾರ್‌, ರೆಸ್ಟೋರೆಂಟ್‌ ವ್ಯಾಪಾರದ ಅವಧಿ ವಿಸ್ತರಿಸಿದ ಬೆಂಗಳೂರು ಪೊಲೀಸ್

ಕತಾರ್‌ ವಿಶ್ವಕಪ್ ಫೀವರ್ ಬೆಂಗಳೂರಿಗೂ ತಟ್ಟಿದ್ದು ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಬೆಂಗಳೂರು ಪೊಲೀಸರು ನಗರದಲ್ಲಿನ ತಿಂಡಿ-ತಿನಿಸು ವ್ಯಾಪಾರದ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕತಾರ್‌ ವಿಶ್ವಕಪ್ ಫೀವರ್ ಬೆಂಗಳೂರಿಗೂ ತಟ್ಟಿದ್ದು ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಬೆಂಗಳೂರು ಪೊಲೀಸರು ನಗರದಲ್ಲಿನ ತಿಂಡಿ–ತಿನಿಸು ವ್ಯಾಪಾರದ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿ ಇದೀಗ ಸೆಮಿ ಫೈನಲ್ ಹಂತ ತಲುಪಿದ್ದು, ಇಡೀ ಜಗತ್ತು ಕುತೂಹಲಕಾರಿಯಾಗಿ ಟೂರ್ನಿಯ ನಿರ್ಣಾಯಕ ಹಂತದ ಪಂದ್ಯಗಳನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತು ಕಾಯುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ಕ್ರೀಡಾ ಪ್ರೇಮಿಗಳು, ಸೆಮಿ ಫೈನಲ್ ಪಂದ್ಯಗಳ ವೀಕ್ಷಣೆಗೆ ಸಜ್ಜಾಗಿದ್ದಾರೆ. 

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯಗಳು ಡಿ.14 ಹಾಗೂ 15ರಂದು ನಡೆಯಲಿದ್ದು, ಪೊಲೀಸ್‌ ಆಯುಕ್ತ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ ತಿನಿಸು ವ್ಯಾಪಾರ ನಡೆಸುವ ಅವಧಿಯನ್ನು ವಿಸ್ತರಿಸಿ ಹೆಚ್ಚುವರಿ ಪೊಲೀಸ್‌ ಆಯುಕ್ತ (ಆಡಳಿತ) ಡಾ.ಎ. ಸುಬ್ರಮಣ್ಯೇಶ್ವರ ರಾವ್‌ ಆದೇಶ ಹೊರಡಿಸಿದ್ದಾರೆ.

ವ್ಯಾಪಾರ ಅವಧಿಯನ್ನು ರಾತ್ರಿ 1ರಿಂದ ಮುಂಜಾನೆ 3.30ರ ತನಕ ವಿಸ್ತರಣೆ ಮಾಡಲಾಗಿದೆ. ಫೆಡರೇಷನ್‌ ಆಫ್‌ ಕ್ಲಬ್‌ ಸದಸ್ಯರ ಮನವಿ ಮೇರೆಗೆ ಈ ಆದೇಶ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಾರ್ಗಸೂಚಿ ಪಾಲಿಸುವ ಷರತ್ತಿಗೆ ಒಳಪಟ್ಟು ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂಜಾನೆ 3.30ರಿಂದ ಬೆಳಿಗ್ಗೆ 6 ಗಂಟೆ ತನಕ ವ್ಯಾಪಾರ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು. ಅಬಕಾರಿ ಪರವಾನಗಿ ಪಡೆದು ಮದ್ಯ ಮಾರಾಟ ಮಾಡುವ ಬಾರ್‌, ರೆಸ್ಟೋರೆಂಟ್‌, ಕ್ಲಬ್‌ ಹಾಗೂ ಹೋಟೆಲ್‌ಗಳ ವಹಿವಾಟು ಅವಧಿಯು (ಸಿಎಲ್‌9, ಸಿಎಲ್‌4, ಸಿಎಲ್‌7) ಅಬಕಾರಿ ನಿಯಮ ಹಾಗೂ ಷರತ್ತುಗಳಿಗೆ ಒಳಪಟ್ಟಿರುತ್ತವೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಈ ಆದೇಶವು ಅನ್ವಯ ಆಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com